ಯಶಸ್ವಿ ಕಲಾವೃಂದದ ೧೦೦ನೇ ಕಾರ್ಯಕ್ರಮ ಯಕ್ಷಗಾನದ ಬೆಳವಣಿಗೆಗೆ ಪ್ರೋತ್ಸಾಹ ನೀಡುವ ಸಂಸ್ಥೆಗಳಿಗೆ ಅಕಾಡೆಮಿಯಿಂದ ಪೂರ್ಣ ಸಹಕಾರ : ಅಧ್ಕಕ್ಷ ಡಾ.ತಲ್ಲೂರು

ಯಶಸ್ವಿ ಕಲಾವೃಂದದ ೧೦೦ನೇ ಕಾರ್ಯಕ್ರಮ ಯಕ್ಷಗಾನದ ಬೆಳವಣಿಗೆಗೆ ಪ್ರೋತ್ಸಾಹ ನೀಡುವ ಸಂಸ್ಥೆಗಳಿಗೆ ಅಕಾಡೆಮಿಯಿಂದ ಪೂರ್ಣ ಸಹಕಾರ : ಅಧ್ಕಕ್ಷ ಡಾ.ತಲ್ಲೂರು

0Shares

ಉಡುಪಿ : ಯಕ್ಷಗಾನದ ಬೆಳವಣಿಗೆಗೆ ಪ್ರೋತ್ಸಾಹ ನೀಡುವ ಸಂಸ್ಥೆಗಳಿಗೆ ಯಕ್ಷಗಾನ ಅಕಾಡೆಮಿ ಸಂಪೂರ್ಣ ಸಹಕಾರ ನೀಡಲಿದೆ ಎಂದು ಅಕಾಡೆಮಿಯ ಅಧ್ಕಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಅವರು ಭಾನುವಾರ ಕುಂದಾಪುರ ಸಮೀಪದ ತೆಕ್ಕಟ್ಟೆಯ ಹಯಗ್ರೀವ ಸಭಾಂಗಣದಲ್ಲಿ ಯಶಸ್ವಿ ಕಲಾವೃಂದ ಸಂಸ್ಥೆ ಸಂಸ್ಥೆಯ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಪ್ರಯುಕ್ತ ೧೦೦ನೇ ಕಾರ್ಯಕ್ರಮವಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಕಾರದಲ್ಲಿ ಹಮ್ಮಿಕೊಂಡ ವಿಶ್ರಾಂತ ಕಲಾವಿದರಿಂದ ಗಾನ ವೈಭವ, ದೊಂದಿ ಹಾಗೂ ಮಂದ ಬೆಳಕಿನ ಯಕ್ಷಗಾನ ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯಶಸ್ವಿ ಕಲಾವೃಂದ ಬೆಳ್ಳಿ ಹಬ್ಬದ ಪ್ರಯುಕ್ತ ಇದೀಗ ೧೦೦ನೇ ಕಾರ್ಯಕ್ರಮವನ್ನು ಸಂಘಟಿಸಿರುವುದು ದೊಡ್ಡ ಸಾಧನೆಯಾಗಿದೆ. ಅಕಾಡೆಮಿಯಿಂದ ಈ ಸಂಸ್ಥೆಗೆ ಸಿಗುವ ಎಲ್ಲಾ ಸಹಕಾರವನ್ನು ನೀಡಲಾಗುವುದು. ಯಕ್ಷಗಾನದ ಉಳಿವು, ಬೆಳವಣಿಗೆಗೆ ಶ್ರಮಿಸುತ್ತಿರುವ ಸಂಸ್ಥೆಗಳು, ಕಲಾವಿದರನ್ನು ಗುರುತಿಸಿ, ಪ್ರೋತ್ಸಾಹಿಸುವ ಕಾರ್ಯಕ್ಕೆ ಅಕಾಡೆಮಿ ಮುಂದಾಗಿದೆ ಎಂದು ಅವರು ತಿಳಿಸಿದರು.

ಉಡುಪಿಯ ಯಕ್ಷಗಾನ ಕಲಾರಂಗದ ಸಾಧನೆಯನ್ನು ಪ್ರಶಂಸಿದ ಅವರು, ಪ್ರೌಢಶಾಲೆಗಳಲ್ಲಿ ಯಕ್ಷ ಶಿಕ್ಷಣವನ್ನು ಕಳೆದ ೧೭ ವರ್ಷಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಹಿಂದೆ ಸಂಸ್ಥೆಯ ಕಾರ್ಯದರ್ಶಿ ಮುರಲಿ ಕಡೆಕಾರ್ ಅವರ ನಿಸ್ವಾರ್ಥ ಸೇವೆ ಅಡಗಿದೆ. ಇವರ ಫಲಶ್ರುತಿಯಾಗಿ ಇಂದು ೯೦ಕ್ಕೂ ಅಧಿಕ ಶಾಲೆಗಳಲ್ಲಿ ೩,೦೦೦ಕ್ಕೂ ಅಧಿಕ ಮಕ್ಕಳು ಯಕ್ಷ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ತಾನಿಂದು ಯಕ್ಷ ಶಿಕ್ಷಣವನ್ನು ಪಡೆದು ಈ ಸ್ಥಾನಕ್ಕೇರಲು ಕಾರಣೀಭೂತರಾದವರಲ್ಲಿ ಅವರು ಕೂಡಾ ಒಬ್ಬರಾಗಿದ್ದಾರೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಪಿಡಬ್ಲ್ಯೂಡಿ ಕ್ಲಾಸ್ ೧ ಗುತ್ತಿಗೆದಾರ ದಿನೇಶ್ ಹೆಗ್ಡೆ ಮೊಳಹಳ್ಳಿ ಮಾತನಾಡಿ, ಕಳೆದ ೨೫ ವರ್ಷಗಳಿಂದ ಯಕ್ಷಗಾನ, ನಾಟಕ, ನೃತ್ಯ ಮೊದಲಾದ ಹಲವಾರು ಕಾರ್ಯಕ್ರಮಗಳನ್ನು ನಡೆಸಿ, ಕಲಾವಿದರನ್ನು ಹುಟ್ಟು ಹಾಕುವ ಮೂಲಕ ಯಶಸ್ವಿ ಕಲಾವೃಂದವಾಗಿ ಮೂಡಿಬಂದಿರುವುದು ಶ್ಲಾಘನೀಯ ಎಂದರು.

ಇತಿಹಾಸ ತಜ್ಞ ಡಾ.ಬಿ.ಜಗದೀಶ್ ಶೆಟ್ಟಿ ಮಾತನಾಡಿ, ಯಕ್ಷಗಾನ ಕಲೆಯ ಶ್ರೀಮಂತಿಗೆ ತನ್ನದೇ ಕೊಡುಗೆ ನೀಡಿದ ಈ ಸಂಸ್ಥೆಯ ಕಾರ್ಯ ಇನಷ್ಟು ಮುಂದುವರಿಯಲಿ ಎಂದರು.

ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಮಾತನಾಡಿ, ಮಾತು ಮುಖ್ಯವಲ್ಲ, ಕ್ರಿಯೆ ಮುಖ್ಯ, ಅದನ್ನು ಯಶಸ್ವಿಯಾಗಿ ಮಾಡಿತೋರಿಸಿದ ಶ್ರೇಯಸ್ಸು ಯಶಸ್ವಿ ಕಲಾವೃಂದಕ್ಕೆ ಸಲ್ಲುತ್ತದೆ. ಎಲ್ಲಾ ಕಲೆಗೂ ತೆರೆದ ಬಾಗಿಲು ಮೂಲಕ ಸ್ವಾಗತಿಸಿ, ಪ್ರೋತ್ಸಾಹ ನೀಡಲಾಗುತ್ತಿದೆ. ಈ ಸಾಧನೆಯನ್ನು ಗುರುತಿಸಿ ಕಲಾರಂಗ ಪೇಜಾವರ ಶ್ರೀ ವಿಶ್ವೇಶ್ವತೀರ್ಥ ಸ್ವಾಮೀಜಿ ಅವರ ಹೆಸರಿನ ಪ್ರಶಸ್ತಿ ನೀಡಿ ಗೌರವಿಸಿದೆ ಎಂಬುದನ್ನು ಅವರು ಸ್ಮರಿಸಿಕೊಂಡರು.

ಯಶಸ್ವಿ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಬೆಳ್ಳಿಹಬ್ಬದ ಪ್ರಯುಕ್ತ ೧೦೮ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಲಾಗಿದ್ದು, ಇದೀಗ ೧೦೦ನೇ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರದ ಯಕ್ಷಗಾನ ಗುರು ಲಂಬೋದರ ಹೆಗಡೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿಶ್ರಾಂತ ಕಲಾವಿದರಿಂದ ನಡೆದ ಗಾನ ವೈಭವ ಕಾರ್ಯಕ್ರಮದಲ್ಲಿ ಹಿರಿಯ ಭಾಗವತರಾದ ಪ್ರಭಾಕರ ಆಚಾರ್ಯ ಹೆಮ್ಮಾಡಿ, ಕೃಷ್ಣಯ್ಯ ಆಚಾರ್ಯ ಬಿದ್ಕಲ್‌ಕಟ್ಟೆ ಹಾಗೂ ಬಸ್ರೂರು ವಿಠಲ ಆಚಾರ್ಯ ಗಾನಸುಧೆಯನ್ನು ಹರಿಸಿದರು. ಮದ್ದಳೆಯಲ್ಲಿ ಕೇಂದ್ರದ ಪ್ರಾಚಾರ್ಯ ದೇವದಾಸ ರಾವ್ ಸಹಕರಿಸಿದರು. ನಂತರ ವಾಲಿವಧೆ ಯಕ್ಷಗಾನ ಪ್ರಸ್ತುತಿಗೊಂಡಿತು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now