
ಉಡುಪಿ, 14 ಜನವರಿ, 2025: ಕನ್ನಡ ನಾಡಿನ ಪ್ರತಿಷ್ಠಿತ ರಂಗಭೂಮಿ ಸಂಸ್ಥೆಗಳಲ್ಲಿ ಒಂದಾಗಿರುವ ರಂಗಭೂಮಿ ಉಡುಪಿ ಸದಾ ಹೊಸತನ್ನು, ಪ್ರಥಮವನ್ನು ನಾಡಿಗೆ ನೀಡಿ ಪ್ರಸಿದ್ಧಿ ಪಡೆದಿದೆ. ಪ್ರಸ್ತುತ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವ ಈ ಸಂಸ್ಥೆ ಇದೀಗ ಪ್ರೌಢಶಾಲೆ ಹಾಗೂ ಕಾಲೇಜು ಮಕ್ಕಳಿಗೆ ರಂಗಶಿಕ್ಷಣವನ್ನು ನೀಡುವ ಮೂಲಕ ರಾಜ್ಯದ ರಂಗಭೂಮಿಯಲ್ಲಿ ಮಹಾನ್ ಕ್ರಾಂತಿಯನ್ನೇ ನಿರ್ಮಿಸಲು ಹೊರಟಿದೆ.

ರಂಗಭೂಮಿ ರಸಗ್ರಹಣ ಶಿಬಿರ ನ.೧೬ರಿಂದ ೧೮ರವರೆಗೆ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ ನಡೆದು ಮೂರು ದಿನಗಳ ಈ ವಸತಿ ಸಹಿತ ಶಿಬಿರದಲ್ಲಿ ಉಡುಪಿ ಪರಿಸರದ ವಿವಿಧ ಕಾಲೇಜುಗಳ ಸುಮಾರು ೧೦೦ ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಕಳದ ಯಕ್ಷ ರಂಗಾಯಣ ಸಂಸ್ಥೆ ಕೈ ಜೋಡಿಸಿತ್ತು. ಸಂಸ್ಥೆಯ ನಿರ್ದೇಶಕ ವೆಂಕಟರಮಣ ಐತಾಳ್, ಹೆಸರಾಂತ ರಂಗಕರ್ಮಿಗಳಾದ ಪ್ರಸನ್ನ, ಅಕ್ಷರ, ನಾಗಾಭರಣ, ಮಂಡ್ಯ ರಮೇಶ್ ಮೊದಲಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಶ್ರಮಿಸಿದರು. ಹಾಗೆಯೇ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಂಗ ಶಿಕ್ಷಣ ನೀಡಲು ನೀನಾಸಂ, ರಂಗಾಯಣ, ರಂಗ ಸಮುದಾಯ ಸೇರಿದಂತೆ ಪ್ರತಿಷ್ಠಿತ ರಂಗಸoಸ್ಥೆಗಳ ೧೦ ಮಂದಿ ರಂಗ ನಿರ್ದೇಶಕರನ್ನು ಬಳಸಿಕೊಳ್ಳಲಾಯಿತು. ನವಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಈ ಗುರುಗಳಿಂದ ೩೦ ತರಗತಿಗಳು ಸುಮಾರು ೫೦ರಿಂದ ೬೦ ಗಂಟೆಗಳಷ್ಟು ಕಾಲ ನಡೆದಿವೆ. ೩೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಮೂಲಕ ರಂಗ ಶಿಕ್ಷಣ ಪಡೆದಿದ್ದಾರೆ.
ಮಕ್ಕಳ ನಾಟಕೋತ್ಸವ ಅದ್ಭುತ : ಎರಡು ಹಂತದಲ್ಲಿ ರಂಗಶಿಕ್ಷಣ ಪಡೆದ ಮಕ್ಕಳ ನಾಟಕಗಳನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಯಿತು. ಡಿ.೨೧ರಂದು ಉದ್ಘಾಟನೆಗೊಂಡ ಮಕ್ಕಳ ನಾಟಕೋತ್ಸವದ ಪ್ರಥಮ ಹಂತದಲ್ಲಿ ೫ ಪ್ರೌಢಶಾಲೆಗಳ ಮಕ್ಕಳಿಂದ ೫ ನಾಟಕಗಳು ಪ್ರದರ್ಶನಗೊಂಡವು. ಈ ನಾಟಕೋತ್ಸವವನ್ನು ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರು ಉದ್ಘಾಟಿಸಿದ್ದರು. ಜ.೨ರಂದು ಇನ್ನುಳಿದ ೭ ಶಾಲೆಗಳ ಮಕ್ಕಳಿಂದ ೭ ನಾಟಕಗಳು ಪ್ರಸ್ತುತಿಗೊಂಡವು. ಸಮಾರೋಪದಲ್ಲಿ ಖ್ಯಾತ ರಂಗಕರ್ಮಿ ಡಾ. ಜೀವನ್‌ರಾಂ ಸುಳ್ಯ ಅವರು ಸಮಾರೋಪ ಭಾಷಣ ಮಾಡಿ ರಂಗಶಿಕ್ಷಣದ ಪ್ರಸ್ತುತತೆಯ ಬಗ್ಗೆ ಮನದಟ್ಟು ಮಾಡಿದರು. ಈ ಅಭಿಯಾನದಡಿ ಮುಂದಿನ ವರ್ಷಗಳಲ್ಲಿ ಇನ್ನಷ್ಟು ಶಾಲೆಗಳಿಗೆ ರಂಗಶಿಕ್ಷಣವನ್ನು ವಿಸ್ತರಿಸಲು ರಂಗಭೂಮಿ ಉಡುಪಿ ಚಿಂತನೆ ನಡೆಸಿದೆ. ನಮ್ಮೆಲ್ಲರ ಯೋಜನೆಗಳು ಯಶಸ್ವಿಯಾದರೆ, ಸಮಾಜ ಹಾಗೂ ಶಿಕ್ಷಣ ಸಂಸ್ಥೆಗಳು ಕೈ ಜೋಡಿಸಿದರೆ ಯಕ್ಷ ಶಿಕ್ಷಣದಂತೆ ಈ ಯೋಜನೆ ಕೂಡಾ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ. ಮುಂದಿನ ದಿನಗಳಲ್ಲಿ ಪ್ರತೀ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವದಂದು ಮಕ್ಕಳ ನಾಟಕಗಳು ಪ್ರದರ್ಶನಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದೇ ನನ್ನ ಅಂಬೋಣ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























