
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗ, ಆಂತರಿಕ ಗುಣಮಟ್ಟ ಖಾತರಿ ಕೋಶ ಹಾಗೂ ಪಿ.ಎ ಪ್ರಥಮ ದರ್ಜೆ ಕಾಲೇಜು, ನಡುಪದವು, ಕೊಣಾಜೆ ಇವುಗಳ ಆಶ್ರಯದಲ್ಲಿ ಗ್ರಾಹಕ ಹಿತರಕ್ಷಣೆ ಮತ್ತು ಹಕ್ಕುಗಳಿಗೆ ಸಂಬಂಧಿಸಿದಂತೆ ವಿಶ್ವವಿದ್ಯಾನಿಲಯ ಕಾಲೇಜು ಮತ್ತು ಪಿ.ಎ ಪ್ರಥಮ ದರ್ಜೆ ಕಾಲೇಜುಗಳ ನಡುವಿನ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕುವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಶಿವರಾಮ ಕಾರಂತ ಭವನದಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮವನ್ನು ಮಂಗಳೂರು ಬಾರ್ ಅಸೋಸಿಯೇಶನ್‍ನ ನಿಕಟಪೂರ್ವ ಕಾರ್ಯದರ್ಶಿ ಶ್ರೀಧರ್ ಏಣ್ಮಕಜೆ ಉದ್ಘಾಟಿಸಿ ಮಾತನಾಡಿದರು. ನಮ್ಮ ದೇಶದಲ್ಲಿ ಪ್ರತಿಯೊಬ್ಬರೂ ಕಾನೂನಿನ ಚೌಕಟ್ಟಿನ ಒಳಗೆ ಬದುಕುತ್ತಿದ್ದೇವೆ. ಹಾಗಾಗಿ ಗ್ರಾಹಕ ಹಿತರಕ್ಷಣಾ ಕಾನೂನಿನ ಬಗೆಗೆ ಜಾಗೃತಿ ಹೊಂದಿರುವುದು ಈ ಹೊತ್ತಿನ ಅಗತ್ಯ ಎಂದರು. ಗ್ರಾಹಕ ಹಿತರಕ್ಷಣಾ ವೇದಿಕೆ ಜಿಲ್ಲಾ ಮಟ್ಟದಿಂದ ರಾಷ್ಟ್ರಮಟ್ಟದ ವರೆಗೂ ಇದ್ದು, ಅಗತ್ಯ ಬಿದ್ದಲ್ಲಿ ಸರ್ವೋಚ್ಛ ನ್ಯಾಯಾಲಯದಲ್ಲೂ ದೂರು ದಾಖಲಿಸಲು ಅವಕಾಶವಿದೆ. ತಂತ್ರಜ್ಞಾನ ಬೆಳವಣಿಗೆ ಹೊಂದಿದಂತೆ ಗ್ರಾಹಕ ಹಕ್ಕು ಕಾಯ್ದೆಯಲ್ಲೂ ಸಾಕಷ್ಟು ತಿದ್ದುಪಡಿಗಳನ್ನು ತರಲಾಗಿದೆ. ಮಾರಾಟಗಾರರು ಮಾರಾಟ ಮಾಡುವ ಯಾವುದೇ ವಸ್ತುವಿನಲ್ಲೂ ದೋಷವಿದ್ದಲ್ಲಿ ಅದರ ಸಂಪೂರ್ಣ ಜವಾಬ್ದಾರಿ ಆತನ ಮೇಲಿರುತ್ತದೆ. ಈ ದೃಷ್ಟಿಯಲ್ಲಿ ಪ್ರತಿ ಗ್ರಾಹಕರ ಬಗ್ಗೆಯೂ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ತಿಳಿಸಿದರು.
ಪಿ.ಎ. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಸರ್ಫರಾಜ್ ಹಸೀಂ ಮಾತನಾಡಿ, ಡಿಜಿಟಲ್ ಯುಗದಲ್ಲಿ ಇಂತಹ ಒಪ್ಪಂದಗಳ ಅಗತ್ಯವಿದೆ. ಸಮಾಜದ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಮೋಸ ಹೋಗಿರುವ ಸಾಧ್ಯತೆ ಇದ್ದೇ ಇರುತ್ತದೆ. ಹಾಗಾಗಿ ಈ ಕುರಿತು ಇಡೀ ಸಮಾಜದಲ್ಲಿ ಜಾಗೃತಿ ಮೂಡಿಸುವ ಅನಿವಾರ್ಯತೆಯಿದೆ. ಮೋಸ ಹೋದ ಸಂದರ್ಭ ಮೌಖಿಕ ದೂರಿಗಿಂತ ಲಿಖಿತ ದೂರುಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದರು. ಒಡಂಬಡಿಕೆಯ ಸಂಯೋಜಕ ಡಾ.ಎ.ಸಿದ್ದಿಕ್ ಮಾತನಾಡಿ, ಇವತ್ತಿನ ದಿನಗಳಲ್ಲಿ ಗ್ರಾಹಕರ ಧ್ವನಿ ಇಲ್ಲವಾಗಿದೆ. ಭ್ರೂಣದಲ್ಲಿರುವ ಶಿಶುವಿನಿಂದ ಹಿಡಿದು ಸಾವನ್ನಪ್ಪಿದ ವ್ಯಕ್ತಿವರೆಗೂ ಗ್ರಾಹಕ ಹಿತರಕ್ಷಣಾ ಕಾಯ್ದೆ ಅನ್ವಯವಾಗುತ್ತಿದ್ದು ಎಲ್ಲರೂ ಗ್ರಾಹಕರಾಗಿರುತ್ತಾರೆ. ಮಾರುಕಟ್ಟೆಯಲ್ಲಿ ವಿದ್ಯಾವಂತರೇ ಮೋಸ ಹೋಗುತ್ತಿರುವ ಈ ಕಾಲದಲ್ಲಿ ಗ್ರಾಮೀಣ ಜನರ ಪಾಡೇನು? ಎಂದು ಗಂಭೀರವಾಗಿ ಆಲೋಚನೆ ಮಾಡಬೇಕಾಗಿದೆ. ದೇಶದಲ್ಲಿ ಇಂದಿಗೂ ಗ್ರಾಹಕರ ಪರವಾಗಿ ಮಾತನಾಡುವ ಧ್ವನಿ ಇಲ್ಲವಾಗಿರುವುದು ವಿಷಾದನೀಯ. ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಇಂದಿನ ಅಗತ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಎಸ್ ಮಾತನಾಡಿ ಆನ್‍ಲೈನ್ ಶಾಪಿಂಗ್ ಮಾಡುತ್ತಿರುವ ಈ ಯುಗದಲ್ಲಿ ಗ್ರಾಹಕ ಹಕ್ಕುಗಳ ಬಗ್ಗೆ ಅಗತ್ಯವಾಗಿ ತಿಳಿದುಕೊಳ್ಳಲೇ ಬೇಕಿದೆ. ಈ ನಿಟ್ಟಿನಲ್ಲಿ ಇಂತಹ ಒಡಂಬಡಿಕೆಗಳು ಸಮಾಜಮುಖಿಯಾದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಕಾರಾತ್ಮಕ ಬದಲಾವಣೆಗೆ ಕಾರಣೀಭೂತವಾಗಲಿ ಎಂದು ಆಶಿಸಿದರು. ಪಿ.ಎ ಎಜ್ಯುಕೇಶನ್ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾ ಮುಖ್ಯಸ್ಥ ಡಾ. ಸೈಯದ್ ಅಮೀನ್ ಅಹಮದ್, ವಿ.ವಿ.ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ಸುಧಾ ಎನ್ ವೈದ್ಯ, ಸಾಂಧರ್ಬಿಕವಾಗಿ ಮಾತನಾಡಿದರು. ಪೇಸ್ ನಾಲೆಜ್ ಸಿಟಿಯ ಎ.ಜಿ.ಎಂ ಶರ್ಫುದ್ಧೀನ್ ಪಿ.ಕೆ ಉಪಸ್ಥಿತರಿದ್ದರು. ಆಂತರಿಕ ಗುಣಮಟ್ಟ ಖಾತರಿಕೋಶದ ಸಂಯೋಜಕ ಡಾ. ಸಿದ್ಧರಾಜು ಎಂ.ಎನ್ ಸ್ವಾಗತಿಸಿ, ಉಪನ್ಯಾಸಕಿ ಶೀತಲ್ ವಂದಿಸಿದರು. ಡಾ. ರಮ್ಯಾ ಕೆ. ಆರ್ ಕಾರ್ಯಕ್ರಮ ನಿರೂಪಿಸಿದರು. ವಿವಿಧ ವಿಭಾಗಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























