ಧರ್ಮಸ್ಥಳದಲ್ಲಿ “ನಮ್ಮೂರು ನಮ್ಮ ಕೆರೆ” ಕಾರ್ಯಕ್ರಮ: ೮೦೦ನೆ ಕೆರೆ ಹಸ್ತಾಂತರ ಒoದು ಸಾವಿರ ಕೆರೆಗಳಿಗೆ ಕಾಯಕಲ್ಪ
ಮುಂಬಯಿ (ಆರ್‌ಬಿಐ) , ಡಿ.17: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ “ನಮ್ಮೂರು ನಮ್ಮ ಕೆರೆ” ಕಾರ್ಯಕ್ರಮದಡಿ ಈಗಾಗಲೆ ರಾಜ್ಯದಲ್ಲಿ ೮೦೦ ಕೆರೆಗಳನ್ನು ಪುನಶ್ಚೇತನಗೊಳಿಸಿದ್ದು ೨೦೨೫ರ ಏಪ್ರಿಲ್ ಅಂತ್ಯದೊಳಗೆ ಇನ್ನೂ ೨೦೦ ಕೆರೆಗಳಿಗೆ ಕಾಯಕಲ್ಪ ನೀಡಲು ಉದ್ದೇಶಿಸಲಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪ್ರಕಟಿಸಿದರು.
ಅವರು ಮಂಗಳವಾರ ಧರ್ಮಸ್ಥಳದಲ್ಲಿ ಧರ್ಮಶ್ರೀ ಸಭಾಭವನದಲ್ಲಿ ಪುನಶ್ಚೇತನಗೊಳಿಸಿದ ೮೦೦ನೆ ಕೆರೆಯಾದ ಚೌಡನಹಳ್ಳಿ ಕೆರೆಯನ್ನು ಮಾಜಿಶಾಸಕ ಲಿಂಗೇಶ್ ಅವರಿಗೆ ಹಸ್ತಾಂತರಿಸಿ ಮಾತನಾಡಿದರು.
ಕೆರೆಯನ್ನು ರಕ್ಷಣೆ ಮಾಡಿದರೆ ಪವಿತ್ರ ಗಂಗೆಯನ್ನು ರಕ್ಷಣೆ ಮಾಡಿದಷ್ಟೆ ಪುಣ್ಯ ಸಿಗುತ್ತದೆ. ಜಲ ಸಂರಕ್ಷಣೆ ಮತ್ತು ಸ್ವಚ್ಛಪರಿಸರ ರಕ್ಷಣಾ ಕಾರ್ಯದಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸಬೇಕು. ಕೆರೆಗಳಿಗೆ ಕಸ, ಕಲ್ಮಶ, ತ್ಯಾಜ್ಯವನ್ನು ಹಾಕಬಾರದು. ಕೆರೆಗಳಿಗೆ ಕಾಯಕಲ್ಪ ನೀಡುವುದು ತಮಗೆ ಅತ್ಯಂತ ಪ್ರಿಯವಾದ ಕಾಯಕವಾಗಿದ್ದು, ಕೆರೆಯ ಸುತ್ತಲೂ ಹಣ್ಣುಹಂಪಲಿನ ಗಿಡಗಳನ್ನು ಬೆಳೆಸಬೇಕು ಎಂದು ಅವರು ಸಲಹೆ ನೀಡಿದರು. ಎಲ್ಲಾ ಕೆಲಸವನ್ನು ಸರ್ಕಾರ, ಗ್ರಾಮಪಂಚಾಯಿತಿ ಮಾಡಬೇಕೆಂದು ನಿರೀಕ್ಷಿಸದೆ, ನಮ್ಮ ಊರು, ನಮ್ಮ ಕೆರೆ ಮತ್ತು ಪರಿಸರಸಂರಕ್ಷಣೆ ಎಲ್ಲರ ಕರ್ತವ್ಯವೂ, ಹೊಣೆಗಾರಿಕೆಯೂ ಆಗಿದೆ ಎಂದು ಅವರು ಹೇಳಿದರು.
ಹೇಮಾವತಿ ವೀ. ಹೆಗ್ಗಡೆ ಮಾತನಾಡಿ, ಕೆರೆಯು ಆಯಾ ಊರಿನ ಕಲ್ಪವೃಕ್ಷವಾಗಿದ್ದು ಸಕಲ ಜೀವರಾಶಿಗಳಿಗೂ ಉಪಯುಕ್ತವಾಗಿದೆ. ಪ್ರತಿ ದೇವಾಲಯದಲ್ಲಿ ಕ್ಷೇತ್ರಪಾಲ ರಕ್ಷಣೆ ಮಾಡಿದಂತೆ ಕೆರೆ ಸಮಿತಿಯವರು ಊರಿನ ಕೆರೆಯನ್ನು ಜತನದಿಂದ ಕಾಪಾಡಬೇಕು ಎಂದು ಅವರು ಕಿವಿಮಾತು ಹೇಳಿದರು.
ಶಿವಾನಂದ ಕಳವೆ ಸಂಪನ್ಮೂಲ ವ್ಯಕ್ತಿಯಾಗಿ ಕೆರೆಗಳ ಸಂರಕ್ಷಣೆ ಬಗ್ಯೆ ಮಾಹಿತಿ, ಮಾರ್ಗದರ್ಶನ ನೀಡಿದರು. ಕೆರೆ ಸಮಿತಿಯ ಸದಸ್ಯ ಕಿತ್ತೂರಿನ ಮಲ್ಲಿಕಾರ್ಜುನ ಹುದಲಿ ಅನಿಸಿಕೆ ವ್ಯಕ್ತಪಡಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಕ ನಿರ್ದೇಶಕ ಅನಿಲ್‌ಕುಮಾರ್, ಎಸ್.ಎಸ್. ಉಪಸ್ಥಿತರಿದ್ದರು. ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಸ್ವಾಗತಿಸಿದರು. ಎಂಜಿನಿಯರ್ ನಿಂಗರಾಜ್ ಧನ್ಯವಾದವಿತ್ತರು. ನಿರ್ದೇಶಕ ಶಿವಾನಂದ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now