ಮುಂಬಯಿ, (ಆರ್‌ಬಿಐ), ನ.೧೪: ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಮತ್ತು ಬಿ.ಎಸ್. ಕೆ. ಬಿ. ಎಸೋಸಿಯೇಶನ್ ಸಹಯೋಗದಲ್ಲಿ ಕಾರ್ತಿಕ ಮಾಸ ಶುಕ್ಲ ಪಕ್ಷ ಬಲಿ ಪ್ರತಿಪದೆಯಿಂದ ಉತ್ಥಾನದ್ವಾದಶಿ ತನಕ ತುಳಸಿ ಪೂಜೆಯು ಅತ್ಯಂತ ವಿಜೃಂಭಣೆಯಿಂದ ಆಚರಿಸಲ್ಪಟ್ಟಿತು. ಶನಿವಾರ ದಿನಾಂಕ ೨.೧೧.೨೦೨೪ ರಿಂದ ಮಂಗಳವಾರ ದಿನಾಂಕ ೧೨.೧೧.೨೦೨೪ರ ವರೆಗೆ ಸಂಜೆ ೫ ಗಂಟೆಯಿಂದ ಹರಿನಾಮ ಸಂಕೀರ್ತನೆ, ಭರತನಾಟ್ಯ, ತಾಳ ವಾದ್ಯ ಕಚೇರಿ, ಸ್ಯಾಕ್ಸೋಫೋನ್ ವಾದನ ಇತ್ಯಾದಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಗೋಕುಲ ಭಜನಾ ಮಂಡಳಿ ಮತ್ತು ಗೋಕುಲ ಸಾಂಸ್ಕೃತಿಕ ಶಿಕ್ಷಣ ಕೇಂದ್ರದ ಆಯೋಜನೆಯಲ್ಲಿ ಸಾಂಸ್ಕೃತಿಕ ಉತ್ಸವ ಅತ್ಯಂತ ವ್ಯವಸ್ಥಿತವಾಗಿ ಜರಗಿತು. ನಂತರ ತುಳಸಿ ಪೂಜೆ ಹಾಗೂ ಗೋಕುಲದ ಮತ್ತು ವಿವಿಧ ಮಠಗಳ ಪುರೋಹಿತ ವರ್ಗದವರಿಂದ ತುಳಸಿ ಸಂಕೀರ್ತನೆ ಜರಗಿತು.
ಶ್ರೀ ಹರಿಗೆ ಅತ್ಯಂತ ಪ್ರಿಯಳಾದ ಹಾಗೂ ಪೌರಾಣಿಕ ಮಹತ್ವವುಳ್ಳ ಪವಿತ್ರ ಶ್ರೀಕೃಷ್ಣ ತುಳಸೀ ವಿವಾಹದ ದಿನ ವಾದ ಬುಧವಾರ(ನ.೧೩) ಉತ್ಥಾನ ದ್ವಾದಶಿ ಪರ್ವಕಾಲದಲ್ಲಿ, ಬೆಳಿಗ್ಗೆ ವೇ.ಮೂ. ದರೆಗುಡ್ಡೆ ಶ್ರೀನಿವಾಸ್ ಭಟ್ ರವರು ಅರ್ಚಕ ಅಕ್ಷಯ್ ಬಲ್ಲಾಳ್ ರವರ ಸಹಕಾರದೊಂದಿಗೆ ಶ್ರೀ ಗೋಪಾಲಕೃಷ್ಣ ದೇವರ ದಿವ್ಯ ಮೂರ್ತಿಯನ್ನು ಸುಂದರವಾಗಿ ಅಲಂಕರಿಸಿ, ನಿತ್ಯಪೂಜೆಯಾದ ನಂತರ ತುಳಸೀ ಪೂಜೆ, ಸಂಕೀರ್ತನೆ ಇತ್ಯಾದಿ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.
ಸಂಜೆ ಅಲಂಕೃತ ತುಳಸಿ ವೃಂದಾವನದಲ್ಲಿ ತುಳಸಿ ದೇವಿಯ ಮೂರ್ತಿಯನ್ನು ಶಾಲಿನಿ ಉಡುಪರವರು ಅತ್ಯಂತ ಸುಂದರವಾಗಿ ಅಲಂಕರಿಸಿದ್ದರು. ಶ್ರೀ ಗೋಪಾಲಕೃಷ್ಣ ದೇವಾಲಯದಲ್ಲಿ ರಾತ್ರಿ ಪೂಜೆ ಜರಗಿದ ಬಳಿಕ ವೈಭವದ ಶ್ರೀ ಕೃಷ್ಣ ತುಳಸೀ ವಿವಾಹ, ಕ್ಷೀರಾಬ್ಧಿ ಮಹೋತ್ಸವವನ್ನು ಅಂದಿನ ಪ್ರಾಯೋಜಕರಾದ ಅಧ್ಯಕ್ಷ ಡಾ. ಸುರೇಶ್ ಎಸ್ ರಾವ್, ಶ್ರೀಮತಿ ವಿಜಯಲಕ್ಷ್ಮಿ ದಂಪತಿ ಯಜಮಾನತ್ವದಲ್ಲಿ ದರೆಗುಡ್ಡೆ ಶ್ರೀನಿವಾಸ್ ಭಟ್ ರವರು ಸಾಂಪ್ರ ದಾಯಿಕವಾಗಿ ನೆರವೇರಿಸಿದರು. ತದನಂತರ ತುಳಸಿ ಸಂಕೀರ್ತನೆ, ತೀರ್ಥ-ಪ್ರಸಾದ ವಿತರಣೆ, ಲಘು ಉಪಹಾರ ದೊಂದಿಗೆ ಧಾರ್ಮಿಕ ಕಾರ್ಯಕ್ರಮ ಸಂಪನ್ನಗೊಂಡಿತು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now