ಜಗ್ಗೇಶ್ ನಟನೆಯ ‘ಮಠ’, ‘ಎದ್ದೇಳು ಮಂಜುನಾಥ’ ಇನ್ನೂ ಕೆಲವು ಜನಪ್ರಿಯ ಸಿನಿಮಾಗಳನ್ನು ನಿರ್ದೇಶಿಸಿದ್ದ, ಕೆಲವು ಸಿನಿಮಾಗಳಲ್ಲಿ ನಟನೆ ಸಹ ಮಾಡಿದ್ದ ಗುರುಪ್ರಸಾದ್ ನಿಧನ ಹೊಂದಿದ್ದಾರೆ. ಅವರಿಗೆ 50 ವರ್ಷ ವಯಸ್ಸಾಗಿತ್ತು. ಗುರುಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಗುರುಪ್ರಸಾದ್ ಅವರು ಸಾಲದ ಬಾಧೆಯಿಂದ ಬಳಲುತ್ತಿದ್ದರು. ಅವರು ನಿರ್ದೇಶನ ಮಾಡಿದ್ದ ಇತ್ತೀಚೆಗಿನ ಸಿನಿಮಾ ‘ರಂಗನಾಯಕ’ ಹೀನಾಯ ಸೋಲು ಕಂಡಿತ್ತು. ‘ರಂಗನಾಯಕ’ ಸಿನಿಮಾದ ಫ್ಲಾಪ್ ಬಳಿಕ ಗುರುಪ್ರಸಾದ್ ಸಾಲಗಳಿಗೆ ಸಿಲುಕಿದ್ದರು. ಮಾತ್ರವಲ್ಲದೆ ಕೆಲ ತಿಂಗಳ ಹಿಂದೆ ಗುರುಪ್ರಸಾದ್ ಎರಡನೇ ಮದುವೆ ಸಹ ಆಗಿದ್ದರು ಎನ್ನಲಾಗುತ್ತಿದೆ. ಇದೀಗ ಏಕಾ-ಏಕಿ ನೇಣಿಗೆ ಕೊರಳೊಡ್ಡಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಬಳಿಯ ಅಪಾರ್ಟ್ ಮೆಂಟ್ ಒಂದರಲ್ಲಿ ಗುರುಪ್ರಸಾದ್ ವಾಸವಿದ್ದರು, ಅದೇ ಮನೆಯಲ್ಲಿ ಈಗ ಗುರುಪ್ರಸಾದ್ ಅವರ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ದೌಡಾಯಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗುರುಪ್ರಸಾದ್ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಿದ್ದಾರೆ ಪೊಲೀಸರಗುರುಪ್ರಸಾದ್ ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕರಲ್ಲಿ ಒಬ್ಬರು. ‘ಮಠ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಗುರುಪ್ರಸಾದ್ ಮೊದಲ ಸಿನಿಮಾಕ್ಕೆ ರಾಜ್ಯ ಪ್ರಶಸ್ತಿ ಪಡೆದಿದ್ದರು. ಅದಾದ ಬಳಿಕ ನಿರ್ದೇಶಿಸಿದ ‘ಎದ್ದೇಳು ಮಂಜುನಾಥ’ ಭಾರಿ ದೊಡ್ಡ ಹಿಟ್ ಆಯ್ತು, ಕಲ್ಟ್ ಕಾಮಿಡಿ ಸಿನಿಮಾ ಆಗಿ ಗುರುತಿಸಲಾಗುತ್ತಿದೆ. ಅದಾದ ಬಳಿಕ ‘ಡೈರೆಕ್ಟರ್ಸ್ ಸ್ಪೆಷಲ್’ ಸಿನಿಮಾ ಮಾಡಿದರು. ಈ ಸಿನಿಮಾ ಮೂಲಕ ಡಾಲಿ ಧನಂಜಯ್ ನಾಯಕನಾಗಿ ಪರಿಚಯಗೊಂಡರು. ಅದಾದ ಬಳಿಕ 2017 ರಲ್ಲಿ ‘ಎರಡನೇ ಸಲ’ ನಿರ್ದೇಶಿಸಿದರು. ಆ ಸಿನಿಮಾ ಸಾಧಾರಣ ಯಶಸ್ಸನ್ನಷ್ಟೆ ಕಂಡಿತು.
‘ಎರಡನೇ ಸಲ’ ಸಿನಿಮಾ ಆದಮೇಲೆ ದೊಡ್ಡ ಬ್ರೇಕ್ ತೆಗೆದುಕೊಂಡಿದ್ದ ಗುರುಪ್ರಸಾದ್ ಇದೇ ವರ್ಷದಲ್ಲಿ ಜಗ್ಗೇಶ್ ಅವರೊಟ್ಟಿಗೆ ‘ರಂಗನಾಯಕ’ ಸಿನಿಮಾ ಮಾಡಿದರು. ಸಿನಿಮಾ ಚಿತ್ರಮಂದಿರದಲ್ಲಿ ಅಟ್ಟರ್ ಫ್ಲಾಪ್ ಆಯ್ತು. ‘ರಂಗನಾಯಕ’ ಸಿನಿಮಾದ ಸೋಲಿನಿಂದ ವಿಚಲಿತರಾಗಿದ್ದ ಗುರುಪ್ರಸಾದ್ ಸಾಕಷ್ಟು ಸಾಲಗಳಿಗೆ ಸಿಲುಕಿಕೊಂಡಿದ್ದರು. ಕೊನೆಗೆ ಈಗ ನಿಧನ ಹೊಂದಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now