ಉಡುಪಿ : ಹೇಮಂತ್ ಪೂಜಾರಿ ಹೆಸರಿನಲ್ಲಿ ಉದ್ಯಮಿಗಳಿಗೆ ಬೆದರಿಕೆ ಕರೆ

ಉಡುಪಿ : ಹೇಮಂತ್ ಪೂಜಾರಿ ಹೆಸರಿನಲ್ಲಿ ಉದ್ಯಮಿಗಳಿಗೆ ಬೆದರಿಕೆ ಕರೆ
0Shares

ಉಡುಪಿ : ಮುದರಂಗಡಿಯ ಉದ್ಯಮಿ ಡೇವಿಡ್ ಡಿಸೋಜಾ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಗುರುತಿಸಿಕೊಂಡಿರುವ ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಿನಲ್ಲಿ ಉದ್ಯಮಿಗಳು ಹಾಗೂ ಪ್ರತಿಷ್ಠಿತ ವ್ಯಕ್ತಿಗಳಿಗೆ ಬೆದರಿಕೆ ಕರೆಗಳು ಬರುತ್ತಿವೆ ಎನ್ನಲಾಗಿದೆ. ಈ ಸಂಬಂಧ ಜಿಲ್ಲೆಯ ಮೂರು ಪೊಲೀಸ್‌ ಠಾಣೆಗಳು ಹಾಗೂ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ದೂರುಗಳು ದಾಖಲಾಗಿವೆ.

ಕೊಲೆಯಾದ ಡೇವಿಡ್ ಡಿಸೋಜಾ ಅವರ ಪುತ್ರನಿಗೆ ಹೇಮಂತ್ ಪೂಜಾರಿ ಹೆಸರಿನಲ್ಲಿ ವಾಟ್ಸಾಪ್ ಕರೆ ಮಾಡಿ ₹5 ಕೋಟಿ ನೀಡುವಂತೆ ಬೇಡಿಕೆ ಇಡಲಾಗಿದೆ ಎನ್ನಲಾಗಿದೆ. “ನಿನ್ನ ತಂದೆಯಿಂದ ನನ್ನ ಸಹೋದರನಿಗೆ ಸಾಕಷ್ಟು ನಷ್ಟವಾಗಿತ್ತು. ಹೀಗಾಗಿ ನಾನೇ ಕೊಲೆ ಮಾಡಿಸಿದ್ದೆ. ನಮಗಾದ ನಷ್ಟವನ್ನು ತುಂಬಿಕೊಡಲು ₹5 ಕೋಟಿ ನೀಡಬೇಕು” ಎಂದು ಕರೆ ಮಾಡಿದ ವ್ಯಕ್ತಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಶಿರ್ವ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಇನ್ನೊಬ್ಬ ಉದ್ಯಮಿ ಹಾಗೂ ಖಾಸಗಿ ಸಂಸ್ಥೆಯ ವ್ಯಕ್ತಿಗೂ ಹೇಮಂತ್ ಪೂಜಾರಿ ಹೆಸರಿನಲ್ಲಿ ವಾಟ್ಸಾಪ್ ಕರೆಗಳು ಬಂದಿದ್ದು, ಹಣಕ್ಕೆ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಲಾಗಿದೆ ಎನ್ನಲಾಗಿದೆ. ಈ ಸಂಬಂಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರುಗಳು ದಾಖಲಾಗಿದ್ದು, ಎರಡು ಪ್ರಕರಣಗಳು ದಾಖಲಾಗಿವೆ ಎಂದು ವರದಿಯಾಗಿದೆ.

ಉದ್ಯಮಿ ಡೇವಿಡ್ ಡಿಸೋಜಾ ಕೊಲೆ ಪ್ರಕರಣದಲ್ಲಿ ಭೂಗತ ಪಾತಕಿ ಹೇಮಂತ್ ಪೂಜಾರಿಯ ಸಹಾಯದಿಂದ ಹೊರರಾಜ್ಯದ ಶೂಟರ್‌ಗಳನ್ನು ಕರೆಸಲಾಗಿತ್ತು ಎನ್ನಲಾಗಿದೆ. ಆತನ ಸಹೋದರ ಹಾಗೂ ಗುತ್ತಿಗೆದಾರ ಕಿಶೋ‌ರ್ ಪೂಜಾರಿ ಇತರ ಸಹಚರರೊಂದಿಗೆ ಸೇರಿ ಕೊಲೆ ನಡೆಸಿದ್ದಾನೆ ಎಂಬ ಆರೋಪವಿದೆ. ಈ ಪ್ರಕರಣದಲ್ಲಿ ಹೇಮಂತ್ ಪೂಜಾರಿಯನ್ನು ಹೊರತುಪಡಿಸಿ ಉಳಿದ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.

ಕಳೆದ 25 ವರ್ಷಗಳಿಂದ ಪೊಲೀಸರಿಗೆ ಬೇಕಾಗಿರುವ ಹೇಮಂತ್ ಪೂಜಾರಿಯ ಸುಳಿವು ಇನ್ನೂ ಪತ್ತೆಯಾಗಿಲ್ಲ ಎನ್ನಲಾಗಿದೆ. ಆತನ ಅಸ್ತಿತ್ವದ ಬಗ್ಗೆಯೂ ಹಲವು ಪ್ರಶ್ನೆಗಳು ಎದ್ದಿರುವ ಹಿನ್ನೆಲೆಯಲ್ಲಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now