
ಶಿರ್ವ: ಸೆಪ್ಟೆಂಬರ್ 18 ಆತ್ರಾಡಿ ಮಂಗಳೂರು ರಾಜ್ಯ ಹೆದ್ದಾರಿ ಡಾನ್ ಬಾಸ್ಕೋ ಶಾಲೆಯ ಮುಂಭಾಗದ ರಸ್ತೆ ಹಲವು ದಿನಗಳಿಂದ ಗುಂಡಿಗಳಿಂದ ಹದಗೆಟ್ಟಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ರಸ್ತೆಯ ದುರವಸ್ಥೆ ಕುರಿತು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದಿದ್ದರೂ ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ, ಸಾರ್ವಜನಿಕರೇ ಮುಂದಾಗಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಮುಂದಾದ ಘಟನೆ ನಡೆದಿದೆ.

ಶಾಲೆಯ ಮುಂಭಾಗದಲ್ಲಿರುವುದರಿಂದ ಪ್ರತಿದಿನ ನೂರಾರು ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಈ ರಸ್ತೆಯನ್ನು ಬಳಸುತ್ತಿದ್ದಾರೆ. ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ನಿಂತು ರಸ್ತೆಯ ಸ್ಥಿತಿ ಮತ್ತಷ್ಟು ಹದಗೆಡುತ್ತಿದ್ದು, ದ್ವಿಚಕ್ರ ವಾಹನ ಸವಾರರು ಅಪಾಯ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ರಸ್ತೆಯ ನಿರ್ವಹಣೆ ಮತ್ತು ದುರಸ್ತಿ ಕಾರ್ಯವನ್ನು ಸಂಬಂಧಪಟ್ಟ ಇಲಾಖೆಯೇ ಕೈಗೊಳ್ಳಬೇಕಾಗಿದ್ದರೂ, ಇಲಾಖೆಯ ನಿರ್ಲಕ್ಷ್ಯದಿಂದ ದ್ವಿಚಕ್ರ ವಾಹನರು ಹಲವು ಬಾರಿ ಗುಂಡಿಗೆ ಬಿದ್ದು ಅಪಘಾತ ಸಂಭವಿಸಿದ್ದನ್ನು ಕಂಡು ಮಾಜಿ ಶಿರ್ವ ಗ್ರಾಮ ಪಂಚಾಯತ್ ಸದಸ್ಯ ಶ್ರೀನಿವಾಸ್ ಶೆಣೈ ಹಾಗೂ ಉಮ್ರಾರ್ ತಂಡದ ಸದಸ್ಯರು ಸ್ವಯಂಪ್ರೇರಿತರಾಗಿ ಸ್ವಂತ ಖರ್ಚಿನಲ್ಲಿ ಸಿಮೆಂಟು ಹಾಗೂ ಜಲ್ಲಿ ಮಿಕ್ಸ್ ಹಾಕಿ ಸುಮಾರು 500 ಮೀಟರ್ ಉದ್ದದ ರಸ್ತೆಯ ಗುಂಡಿಗಳನ್ನು ಮುಚ್ಚಿ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿರುತ್ತಾರೆ. ಇದನ್ನು ಕಂಡ ವಾಹನ ಸವಾರರು ಹಾಗೂ ಪಾದಚಾರಿಗಳು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.

ಸಾರ್ವಜನಿಕರ ತೆರಿಗೆ ಹಣದಿಂದ ನಿರ್ವಹಿಸಬೇಕಾದ ರಸ್ತೆಗಳನ್ನು ಸಾರ್ವಜನಿಕರೇ ತಮ್ಮ ಸ್ವಂತ ಪ್ರಯತ್ನದಿಂದ ದುರಸ್ತಿ ಮಾಡಬೇಕಾದ ಪರಿಸ್ಥಿತಿ ಏಕೆ? ಎಂಬ ಪ್ರಶ್ನೆ ಇದೀಗ ಸ್ಥಳೀಯರಲ್ಲಿ ಕೇಳಿಬರುತ್ತಿದೆ.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ರಸ್ತೆಯ ಗುಂಡಿಗಳನ್ನು ಶಾಶ್ವತವಾಗಿ ಮುಚ್ಚಿ, ರಸ್ತೆಯನ್ನು ಸುಗಮ ಸಂಚಾರಕ್ಕೆ ಯೋಗ್ಯವಾಗಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now