
ಉದ್ಯಾವರ : ರಾಜಕಾರಣ ಅಂತ ಹೇಳಿದರೆ ಅದು ಅಧಿಕಾರದ ಕುರ್ಚಿಯನ್ನು ಹಿಡಿಯುವಂತಹ ಒಂದು ವ್ಯವಸ್ಥೆ. ಆದರೆ ನಗರ ಸಭೆಯ ಸದಸ್ಯನಾಗಿ ತನ್ನ ರಾಜಕೀಯ ಜೀವನವನ್ನು ಪ್ರಾರಂಭಿಸಿದ ಓಸ್ಕರ್ ಫೆರ್ನಾಡಿಸ್ ರವರು ದೇಶದ ಅತ್ಯುನ್ನತ ರಾಜಕಾರಣದಲ್ಲಿ ಸಕ್ರಿಯರಾಗಿದ್ದರೂ ಕೂಡ, ಮೂಲವಾಗಿ ಅವರೊಳಗೆ ಅಡಕವಾಗಿದ್ದ ಸರಳತೆಯನ್ನು ಅವರು ಎಂದೂ ಬಿಟ್ಟು ಕೊಡಲಿಲ್ಲ. ಸಾಮಾನ್ಯ ಕಾರ್ಯಕರ್ತನನ್ನು ಕೂಡ ಹೆಸರು ಹಿಡಿದು ಕರೆದು ಮಾತಾಡಬಲ್ಲಂತ ಒಂದು ಮನೋಭಾವ ಅವರಲ್ಲಿ ಇತ್ತು. ಹಾಗಾಗಿ ಈಗಿರುವ ಅಧಿಕಾರ ರಾಜಕಾರಣದ ಮಧ್ಯೆ ಸರಳತೆಯ ದೊಡ್ಡ ರೂಪಕವಾಗಿ ಓಸ್ಕರ್ ಫೆರ್ನಾಂಡಿಸ್ ವರು ನಮ್ಮ ಎದುರು ನಿಲ್ಲುತ್ತಾರೆ. ಅಂತಹ ಒಬ್ಬ ನಾಯಕನನ್ನು ಇನ್ನು ಮುಂದೆ ನಾವು ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ನೋಡಲು ಸಾಧ್ಯವಿಲ್ಲ ಎಂದು ಉಡುಪಿ ಸರಕಾರಿ ಹೆಮ್ಮಕ್ಕಳ ಪದವಿಪೂರ್ವ ಕಾಲೇಜಿನ ವಿಶ್ರಾಂತ ಉಪನ್ಯಾಸಕರಾದ ದಯಾನಂದ ಡಿ. ಕಿದಿಯೂರು ಅವರು ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ ಸಂಸ್ಥೆಯ ಗೌರವಾಧ್ಯಕ್ಷರಾಗಿದ್ದ ರಾಷ್ಟ್ರ ನಾಯಕ ಓಸ್ಕರ್ ಫೆರ್ನಾಂಡಿಸ್ ರವರ ಐದನೇ ಪುಣ್ಯತಿಥಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ನುಡಿದರು.
ಅವರು ಮುಂದುವರಿಯುತ್ತ, ಓಸ್ಕರ್ ಫೆರ್ನಾಂಡಿಸ್ ರವರು ತನ್ನ ಬಳಿ ಸಮಸ್ಯೆಯನ್ನು ಹಿಡಿದುಕೊಂಡು ಬಂದಂತಹ ವ್ಯಕ್ತಿಗಳನ್ನು ಪ್ರೀತಿಯಿಂದ ಮಾತನಾಡಿ ಸಮಸ್ಯೆಯನ್ನು ಯಾವುದೇ ಹಮ್ಮು ಬಿಮುವಿಲ್ಲದೆ ಬಗೆಹರಿಸುವ ಛಾತಿಯನ್ನು ಹೊಂದ್ಧಿದ್ದರು. ಅವರ ರಾಜಕೀಯ ನಡೆ ಇಂದಿನ ರಾಜಕೀಯ ವ್ಯಕ್ತಿಗಳಿಗೆ ಮಾದರಿಯಾಗಬೇಕು ಮತ್ತು ಅವರು ಅದನ್ನು ಅನುಸರಿಸಬೇಕು. ಅದುವೇ ನಾವು ಅವರಿಗೆ ಕೊಡುವಂತಹ ಒಂದು ಸುಂದರ ನಮನ ಎಂದರು.
ಉದ್ಯಾವರ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರು, ಸಂಸ್ಥೆಯ ಮಾಜಿ ಅಧ್ಯಕ್ಷರಾದ ರಿಯಾಜ್ ಪಳ್ಳಿವರು ಮಾತನಾಡಿ, ರಾಜಕೀಯದ ಉತ್ತುಂಗ ಸ್ಥಿತಿಯಲ್ಲಿದ್ದ ಓಸ್ಕರ್ ಫೆರ್ನಾಂಡಿಸ್ ರವರು ನಮ್ಮನ್ನೆಲ್ಲಾ ಬಿಟ್ಟು ಹೋದದ್ದು ರಾಜಕೀಯ ಕ್ಷೇತ್ರದಲ್ಲಿ ನಿರ್ವಾತವನ್ನು ಉಂಟು ಮಾಡಿದೆ. ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ರಾಹುಲ್ ಗಾಂಧಿಯವರ ಬೆಂಗಾವಲಿಗೆ ಓಸ್ಕರ್ ಫೆರ್ನಾಂಡಿಸ್ ರವರು ಇರಬೇಕಿತ್ತು ಎಂದು ನನಗೆ ಯಾವಾಗಲೂ ಅನಿಸುತ್ತಿದೆ. ಯಾಕಂತ ಹೇಳಿದರೆ ಯಾವುದೇ ಕಷ್ಟ ಸಂದರ್ಭದಲ್ಲಿ ಗೈಡ್ ಮಾಡಬಲ್ಲಂತಹ ಒಂದು ಧೀರಶಕ್ತಿ ಅವರಲ್ಲಿ ಇತ್ತು ಎಂದರು.
ಸಂಸ್ಥೆಯ ಗೌರವಾಧ್ಯಕ್ಷರೂ ಓಸ್ಕರ್ ಫೆರ್ನಾಂಡಿಸ್ ರವರ ಆಪ್ತ ಸಹಾಯಕರೂ ಆಗಿದ್ದಂತಹ ಉದ್ಯಾವರ ನಾಗೇಶ್ ಕುಮಾರ್ ರವರು ಮಾತನಾಡುತ್ತಾ, ಓಸ್ಕರ್ ಫೆರ್ನಾಂಡಿಸರ ಸರಳ ವ್ಯಕ್ತಿತ್ವದ ರಾಜಕಾರಣವನ್ನು ಎಳೆ ಎಳೆಯಾಗಿ ಬಿಡಿಸಿ ಹೇಳುತ್ತಾ ಇಂದಿನ ರಾಜಕಾರಣದಲ್ಲಿ ಓಸ್ಕರ್ ಫೆರ್ನಾಂಡಿಸ್ ಇದ್ದರೆ ರಾಜಕಾರಣದ ದಿಕ್ಕೆ ಬದಲಾಗುತ್ತಿತ್ತು ಎಂದು ಒಂದೆಡೆ ಅನಿಸಿದರೆ, ಮತ್ತೊಂದೆಡೆ ಇಂದಿನ ಅಧಿಕಾರ ದಾಹದ ರಾಜಕಾರಣ, ದ್ವೇಷ ರಾಜಕಾರಣದ ಮಧ್ಯೆ ಓಸ್ಕರ್ ಫೆರ್ನಾಂಡಿಸರು ಎಲ್ಲೋ ಕಳೆದುಹೋಗುತ್ತಿದ್ದಾರೋ ಎನ್ನುವ ಭಯ ಕೂಡ ಕಾಡುತ್ತೆ. ಏನೇ ಇರಲಿ ಓಸ್ಕರ್ ಫೆರ್ನಾಂಡಿಸುವವರಂತ ಒಬ್ಬ ಸಜ್ಜನ ರಾಜಕಾರಣಿಯನ್ನು ದೇಶ ಕಳಕೊಂಡದ್ದು ಒಂದು ದೊಡ್ಡ ನಷ್ಟ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಚಂದ್ರಾವತಿ ಎಸ್.ಭಂಡಾರಿ, ಯು. ಪದ್ಮನಾಭ ಕಾಮತ್, ಕೋಶಾಧಿಕಾರಿ ಸತೀಶ್ ಡಿ. ಸಾಲ್ಯಾನ್, ಸಂಸ್ಥೆಯ ಸದಸ್ಯರುಗಳಾದ ಸೋಮಶೇಖರ್ ಸುರತ್ಕಲ್, ಆಶಾವಾಸು, ಸರೋಜಾ ಅನುಪ್, ಸರಸ್ವತಿ ಮೆಂಡನ್ , ಅಜಿತ್ ಮೆಂಡನ್, ಶ್ರೀಧರ್ ಮಾಬಿಯಾನ್, ಮಹಮ್ಮದ್ ಆಲಿ ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷರಾದ ಗಿರೀಶ್ ಗುಡ್ಡೆ ಅಂಗಡಿಯವರು ಸ್ವಾಗತಿಸಿದರು. ಕಾರ್ಯಕ್ರಮ ನಿರ್ವಹಿಸಿದ ತಿಲಕ್ ರಾಜ್ ಸಾಲ್ಯಾನ್ ಅವರು ಕೊನೆಯಲ್ಲಿ ವಂದಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now