
ಕುಂದಾಪುರ: ಕುಂದಾಪುರ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ನ 2025–26ನೇ ಸಾಲಿನ 35ನೇ ವಾರ್ಷಿಕ ಸಾಮಾನ್ಯ ಸಭೆಯು ಕುಂದಾಪುರದ ಸಹನಾ ಕನ್ವೆನ್ಷನ್ ಸೆಂಟರ್ನ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಜೋನ್ಸನ್ ಡಿ’ಅಲ್ಮೇಡಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಸುಮಾರು 2,500 ಮಂದಿ ಸದಸ್ಯರು ಭಾಗವಹಿಸಿದ್ದು, ಗಣನೀಯ ಸಂಖ್ಯೆಯಲ್ಲಿ ಸದಸ್ಯರ ಉಪಸ್ಥಿತಿಯಿಂದ ಸಭೆ ಗಮನ ಸೆಳೆಯಿತು.
ಸಭೆಯಲ್ಲಿ 2025–26ನೇ ಸಾಲಿನ ಸಂಘದ ಪರಿಶೋಧಿತ ಲೆಕ್ಕಪತ್ರಗಳು ಹಾಗೂ ವಾರ್ಷಿಕ ವರದಿಯನ್ನು ಮಂಡಿಸಿ, ಸಂಘದ ಆರ್ಥಿಕ ಪ್ರಗತಿ ಹಾಗೂ ಸಾಧನೆಗಳ ಕುರಿತು ಸದಸ್ಯರಿಗೆ ವಿವರಿಸಲಾಯಿತು. 2026ರ ಮಾರ್ಚ್ 31ರ ಅಂತ್ಯಕ್ಕೆ ಸಂಘದ ಒಟ್ಟು ಠೇವಣಿ ₹218.55 ಕೋಟಿ ಹಾಗೂ ಸಾಲದ ಹೊರಬಾಕಿ ₹174.82 ಕೋಟಿ ದಾಖಲಾಗಿದೆ.

ವರದಿ ಸಾಲಿನಲ್ಲಿ ಸಂಘವು ₹4.69 ಕೋಟಿ ನಿವ್ವಳ ಲಾಭ ಗಳಿಸಿದ್ದು, ಸಂಘದ ಉತ್ತಮ ಆರ್ಥಿಕ ಸಾಧನೆಯನ್ನು ಪರಿಗಣಿಸಿ ಸದಸ್ಯರಿಗೆ ಶೇ.22ರಷ್ಟು ಡಿವಿಡೆಂಡ್ ನೀಡುವುದಾಗಿ ಅಧ್ಯಕ್ಷರಾದ ಶ್ರೀ ಜೋನ್ಸನ್ ಡಿ’ಅಲ್ಮೇಡಾ ಅವರು ಸಭೆಯಲ್ಲಿ ಘೋಷಿಸಿದರು.
ಕಳೆದ ಸಾಲಿಗೆ ಹೋಲಿಸಿದರೆ ಸಂಘದ ಠೇವಣಿ ವ್ಯವಹಾರದಲ್ಲಿಯೂ ಗಣನೀಯ ಪ್ರಗತಿ ಕಂಡುಬಂದಿದೆ. ಸದಸ್ಯರ ವಿವಿಧ ಅಗತ್ಯಗಳಿಗೆ ಸಾಲ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ, ಸಂಘವು ತನ್ನ ಆರ್ಥಿಕ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಾ ಪ್ರಗತಿಯತ್ತ ಸಾಗುತ್ತಿದೆ.
ಸದಸ್ಯರ ಮಕ್ಕಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ, ಉತ್ತಮ ಅಂಕಗಳನ್ನು ಗಳಿಸಿದ ಸದಸ್ಯರ ಮಕ್ಕಳಿಗೆ ಸಂಘದ ವತಿಯಿಂದ ವಿದ್ಯಾರ್ಥಿವೇತನವನ್ನು ಮಹಾಸಭೆಯ ಸಂದರ್ಭದಲ್ಲಿ ವಿತರಿಸಲಾಯಿತು. ವಿದ್ಯಾರ್ಥಿವೇತನವನ್ನು ಫಾ. ಪಾವ್ಲ್ ರೇಗೋ ಅವರು ವಿತರಿಸಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರತಿಭೆಯನ್ನು ಉತ್ತೇಜಿಸುವ ಹಾಗೂ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಂಘವು ಕೈಗೊಂಡಿರುವ ಈ ಉಪಕ್ರಮವು ಮೆಚ್ಚುಗೆಗೆ ಪಾತ್ರವಾಯಿತು.

ಇದೇ ಸಂದರ್ಭದಲ್ಲಿ ಬಸ್ರೂರಿನ ಪಿಯೂಸ್ ಡಿಸೋಜಾ ಅವರು ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಹಿನ್ನೆಲೆಯಲ್ಲಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಅವರ ಶೈಕ್ಷಣಿಕ ಸೇವೆ ಹಾಗೂ ಸಾಧನೆಯನ್ನು ಗುರುತಿಸಿ ಸಲ್ಲಿಸಲಾದ ಈ ಗೌರವವು ಸಭೆಯಲ್ಲಿ ಮೆಚ್ಚುಗೆಗೆ ಪಾತ್ರವಾಯಿತು.
ಸಂಘದ ಭವಿಷ್ಯದ ಬೆಳವಣಿಗೆಯ ದೃಷ್ಟಿಯಿಂದ ಅಗತ್ಯವಿರುವ ಶಾಖೆಗಳಿಗೆ ಸ್ವಂತ ಕಟ್ಟಡ ನಿರ್ಮಿಸುವುದು ಹಾಗೂ ಸದಸ್ಯರು ಮತ್ತು ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಆಧುನಿಕ ಸೌಲಭ್ಯಗಳನ್ನು ಅಳವಡಿಸಿಕೊಳ್ಳುವ ಯೋಜನೆಗಳನ್ನು ಆಡಳಿತ ಮಂಡಳಿ ಹೊಂದಿದೆ. ಸಂಘವನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಸದೃಢವಾಗಿ ಬೆಳೆಸುವ ಉದ್ದೇಶದೊಂದಿಗೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲಾಗುತ್ತಿದೆ.
ಸಂಘದ ನಿರಂತರ ಪ್ರಗತಿಗೆ ಆಡಳಿತ ಮಂಡಳಿಯ ಸಮರ್ಥ ಮಾರ್ಗದರ್ಶನ, ಸಿಬ್ಬಂದಿಯ ಕಾರ್ಯತತ್ಪರತೆ ಹಾಗೂ ಸದಸ್ಯರು ಮತ್ತು ಗ್ರಾಹಕರು ಸಂಘದ ಮೇಲಿಟ್ಟಿರುವ ವಿಶ್ವಾಸ ಮತ್ತು ನೀಡುತ್ತಿರುವ ಸಹಕಾರ ಪ್ರಮುಖ ಕಾರಣವಾಗಿದೆ ಎಂದು ತಿಳಿಸಲಾಯಿತು.
ಸಭೆಯಲ್ಲಿ ಸಂಘದ ಮುಖ್ಯ ಸಲಹೆಗಾರರಾದ ವಂದನೀಯ ಫಾ. ಪಾವ್ಲ್ ರೇಗೋ ಅವರು ಉಪಸ್ಥಿತರಿದ್ದು, ಆಡಳಿತ ಮಂಡಳಿ ಹಾಗೂ ಸದಸ್ಯರಿಗೆ ತಮ್ಮ ಶುಭಾಶಯಗಳನ್ನು ಸಲ್ಲಿಸಿದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಮೇಬಲ್ ಡಿ’ಆಲ್ಮೇಡಾ ಅವರು ಸದಸ್ಯರಿಂದ ವ್ಯಕ್ತವಾದ ಅಭಿಪ್ರಾಯಗಳನ್ನು ಸಭೆಯ ಗಮನಕ್ಕೆ ತಂದರು. ಸದಸ್ಯರ ಪ್ರಶ್ನೆಗಳು ಹಾಗೂ ಅಭಿಪ್ರಾಯಗಳಿಗೆ ಅಧ್ಯಕ್ಷರು ಸೂಕ್ತ ಉತ್ತರ ಮತ್ತು ಅಗತ್ಯ ಸ್ಪಷ್ಟೀಕರಣವನ್ನು ನೀಡಿದರು.
ಸಭೆಯಲ್ಲಿ ಸಂಘದ ನಿರ್ದೇಶಕರಾದ ಶ್ರೀ ವಿನೋದ್ ಕ್ರಾಸ್ಟೋ, ಶ್ರೀ ಬ್ಯಾಪ್ಟಿಸ್ಟ್ ಡಾಯಾಸ್, ಶ್ರೀ ಓಜಲಿನ್ ರೆಬೆಲ್ಲೊ, ಶ್ರೀ ವಿಲ್ಸನ್ ಡಿಸೋಜಾ, ಶ್ರೀ ಡೆರಿಕ್ ಡಿಸೋಜಾ, ಶ್ರೀ ವೆಲೆಂಟೈನ್ ಡಿಸೋಜಾ, ಶ್ರೀ ಮೈಕಲ್ ಪಿಂಟೋ, ಶ್ರೀ ಸಂತೋಷ್ ಓಜ್ವಾಲ್ಡ್ ಡಿ’ಸಿಲ್ವಾ, ಶ್ರೀ ಟೆರೆನ್ಸ್ ಸುವಾರಿಸ್, ಶ್ರೀ ರೋವನ್ ಡಿ’ಕೋಸ್ಟಾ, ಶ್ರೀ ಲಿಪ್ಟನ್ ಒಲಿವೇರ, ಶ್ರೀಮತಿ ಶಾಂತಿ ಡಾಯಾಸ್ ಹಾಗೂ ಶ್ರೀಮತಿ ಶಾಂತಿ ಆರ್. ಕರ್ವಾಲ್ಹೊ ಉಪಸ್ಥಿತರಿದ್ದರು.
ನಿರ್ದೇಶಕರಾದ ಶ್ರೀ ಫಿಲಿಪ್ ಡಿ’ಕೋಸ್ಟಾ ರವರು ಸ್ವಾಗತ ಭಾಷಣ ಮಾಡಿದರು. ಶ್ರೀ ಕಿರಣ್ ಲೋಬೋ ವಂದನಾರ್ಪಣೆ ಸಲ್ಲಿಸಿದರು. ಶ್ರೀಮತಿ ಡೈನಾ ಡಿ’ಅಲ್ಮೇಡಾರವರು ನಿರೂಪಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now