
ಉಡುಪಿ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕು ಚಿಕ್ಕಲ್ಲೂರು ಮೀಸಲು ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗುಂಡು ಹಾರಿಸಿದ ಪರಿಣಾಮ ಮೂವರು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವತಂತ್ರ ನ್ಯಾಯಾಂಗ ತನಿಖೆ ನಡೆಸುವಂತೆ ಕರ್ನಾಟಕ ಕ್ರೈಸ್ತ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಪ್ರಶಾಂತ್ ಜತ್ತನ್ನ ಅವರು ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.
ಹನೂರು ತಾಲೂಕಿನ ನಿವಾಸಿಗಳಾದ ಆಂಟನಿ ಸ್ವಾಮಿ (50), ಜಾನ್ ರೋಸ್ ಪೀಟರ್ (42) ಹಾಗೂ ಆಂಟನಿ ಕುಮಾರ್ (33) ಅವರು ಭಾನುವಾರ ಮುಂಜಾನೆ ಕಾವೇರಿ ವನ್ಯಜೀವಿ ವಿಭಾಗದ ಚಿಕ್ಕಲ್ಲೂರು ಮೀಸಲು ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿನ ದಾಳಿಗೆ ಬಲಿಯಾಗಿರುವುದು ನೋವಿನ ಸಂಗತಿಯಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳ ಅತೀರೇಕದ ವರ್ತನೆಯಿಂದ ಅಮಾಯಕ ಜೀವಗಳು ಬಲಿಯಾಗಿದ್ದು ಅವರ ಕುಟುಂಬಗಳನ್ನು ಅನಾಥರನ್ನಾಗಿಸಿದೆ. ಗುಂಡೇಟಿಗೆ ಬಲಿಯಾದವರಿಂದ ಒಂದು ವೇಳೆ ತಪ್ಪಾಗಿದ್ದಲ್ಲಿ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವ ಬದಲು ಏಕಾಏಕಿ ಗುಂಡಿಕ್ಕಿ ಕೊಂದಿರುವುದು ಖಂಡನೀಯ. ಅರಣ್ಯ ಇಲಾಖೆ ಸಿಬ್ಬಂದಿಗಳ ಅಮಾನವೀಯ ವರ್ತನೆ ಕ್ರೈಸ್ತ ಸಮುದಾಯಕ್ಕೆ ಆಘಾತ ತಂದಿದೆ.
ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಅಕ್ರಮ ಪ್ರವೇಶ, ಬೇಟೆ, ಬೇಟೆಯಾಡುವುದು ಅಥವಾ ಯಾವುದೇ ಕಾನೂನುಬಾಹಿರ ಚಟುವಟಿಕೆಗಳನ್ನು ಸಮುದಾಯ ಸಮರ್ಥಿಸುವುದಿಲ್ಲ. ಆದರೆ ಇಂತಹ ಆರೋಪಗಳು ಮಾತ್ರ ಯಾರನ್ನಾದರೂ ಗುಂಡಿಕ್ಕಿ ಹತ್ಯೆ ಮಾಡಲು ಸಮರ್ಥನೆಯಾಗುವುದಿಲ್ಲ. ಘಟನೆಯ ಸತ್ಯಾಂಶವನ್ನು ಹೊರತರುವ, ಹೊಣೆಗಾರಿಕೆಯನ್ನು ನಿಗದಿಪಡಿಸುವ ಹಾಗೂ ಮೃತರ ಕುಟುಂಬಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆ ಅಗತ್ಯವಿದೆ.
ಘಟನೆ ನಡೆದ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯ ಜೀವಕ್ಕೆ ತಕ್ಷಣದ ಮತ್ತು ನಿಜವಾದ ಅಪಾಯವಿತ್ತು ಎಂದು ಸಿಬಂದಿಗಳು ಹೇಳಿದ್ದು ಈ ಎಲ್ಲಾ ಪ್ರಶ್ನೆಗಳಿಗೆ ಊಹಾಪೋಹ ಅಥವಾ ಪರಸ್ಪರ ಆರೋಪಗಳ ಬದಲಿಗೆ ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆಯ ಮೂಲಕ ಉತ್ತರ ಕಂಡುಕೊಳ್ಳಬೇಕು ಘಟನೆಯಲ್ಲಿ ಭಾಗಿಯಾಗಿದ್ದ ಎಲ್ಲಾ ಅರಣ್ಯ ಇಲಾಖೆ ಸಿಬ್ಬಂದಿಯ ಪಾತ್ರವನ್ನು ಸಮಗ್ರವಾಗಿ ಪರಿಶೀಲಿಸುವ ಅಗತ್ಯವಿದೆ.
ಇದೇ ವೇಳೆ, ಮೃತರ ಕುಟುಂಬಗಳಿಗೆ ಸಮರ್ಪಕ ಪರಿಹಾರ ನೀಡಬೇಕು ಮತ್ತು ಮೃತ ಕುಟುಂಬಗಳಿಗೆ ಸರಕಾರ ಸೂಕ್ತ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now