
ಆದಿ ಉಡುಪಿ ಪರಿಸರದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ 62 ವರ್ಷದ ಶ್ರೀಮತಿ ರಂಗಮ್ಮ ಅವರನ್ನು, ಮಹಿಳಾ ಪೊಲೀಸ್ ಠಾಣೆ, ಉಡುಪಿ ಸಿಬ್ಬಂದಿಗಳು ಅವರನ್ನು ರಕ್ಷಿಸಿ ತಾತ್ಕಾಲಿಕ ಆಶ್ರಯಕ್ಕಾಗಿ ಸಖಿ ಸೆಂಟರ್, ನಿಟ್ಟೂರುಗೆ ದಾಖಲಿಸಿದರು.
ಸದರಿ ಪ್ರಕರಣದ ಕುರಿತು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಿಬ್ಬಂದಿಗಳು ಸಖಿ ಸೆಂಟರ್ಗೆ ಭೇಟಿ ನೀಡಿ ವಿಚಾರಣೆ ನಡೆಸಿದಾಗ, ತಮ್ಮ ಹೆಸರು ರಂಗಮ್ಮ ಕೋಂ. ಮಂಗ್ಯಾ ಎಂದು ತಿಳಿಸಿದ್ದು, ಪತಿ ನಿಧನರಾಗಿರುವುದಾಗಿ ಹಾಗೂ ಬದ್ರಮ್ಮ ಮತ್ತು ಸುಮನ್ ಎಂಬ ಇಬ್ಬರು ಮಕ್ಕಳಿರುವುದಾಗಿ ಮಾಹಿತಿ ನೀಡಿದರು. ತಮ್ಮ ಮೂಲ ನಿವಾಸ ನಗರಂ ಕಾಲೋನಿ, ತೆಲಂಗಾಣವಾಗಿದ್ದು, ಕಳೆದ ಎರಡು ವರ್ಷಗಳಿಂದ ಮಕ್ಕಳೊಂದಿಗೆ ಯಾವುದೇ ಸಂಪರ್ಕವಿಲ್ಲ ಎಂದು ತಿಳಿಸಿದರು.
ಪ್ರಸ್ತುತ ರಂಗಮ್ಮ ಅವರಿಗೆ ಆಶ್ರಯವಿಲ್ಲದಿರುವುದರಿಂದ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಯವರ ಸೂಚನೆಯ ಮೇರೆಗೆ, ಅವರ ಸಂಬಂಧಿಕರು ಪತ್ತೆಯಾಗುವವರೆಗೆ ಹೊಸ ಬೆಳಕು ಆಶ್ರಮಕ್ಕೆ ದಾಖಲಿಸಲಾಯಿತು. ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಯೋಜನಾ ಸಂಯೋಜಕರಾದ ರೋಶನ್ ಕೆ ಹಾಗೂ ಆಪ್ತ ಸಮಾಲೋಚಕರಾದ ನಯನ ಅವರು ಈ ಪ್ರಕ್ರಿಯೆಯನ್ನು ನೆರವೇರಿಸಿದರು.
ರಂಗಮ್ಮ ಅವರ ಮಕ್ಕಳನ್ನು ಪತ್ತೆಹಚ್ಚುವಂತೆ ಉಡುಪಿ ನಗರ ಪೊಲೀಸ್ ಠಾಣೆಗೆ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದಿಂದ ಮನವಿ ಮಾಡಲಾಯಿತು.
ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯ ಎ.ಎಸ್.ಐ ವಿಜಯ್ ಹಾಗೂ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹನುಮಂತಪ್ಪ ವಿಭೂತಿ ಅವರು ರಂಗಮ್ಮ ಅವರು ನೀಡಿದ ವಿಳಾಸದ ಆಧಾರದ ಮೇಲೆ ತೆಲಂಗಾಣಕ್ಕೆ ತೆರಳಿ ವಿಚಾರಣೆ ನಡೆಸಿ, ಅವರ ಮಗ ಸುಮನ್ ಅವರ ವಿಳಾಸವನ್ನು ಪತ್ತೆಹಚ್ಚಿದರು. ನಂತರ ಸುಮನ್ ಅವರನ್ನು ಉಡುಪಿಗೆ ಕರೆತಂದು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಕ್ಕೆ ಹಾಜರುಪಡಿಸಿದರು.
ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದಲ್ಲಿ “ಹಿರಿಯ ನಾಗರಿಕರ ಪಾಲನೆ ಮತ್ತು ಕಲ್ಯಾಣ ಕಾಯ್ದೆ–2007”*ರ ಕುರಿತು ಮಗನಿಗೆ ಮಾಹಿತಿ ನೀಡಿ, ತಾಯಿಯನ್ನು ಗೌರವದಿಂದ ಪಾಲನೆ–ಪೋಷಣೆ ಮಾಡುವಂತೆ ಕಾನೂನು ಸಲಹೆ ನೀಡಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಸುಮನ್ ಅವರು, “ಇನ್ನು ಮುಂದೆ ತಾಯಿಯನ್ನು ಪ್ರೀತಿಯಿಂದ ಚೆನ್ನಾಗಿ ನೋಡಿಕೊಳ್ಳುತ್ತೇನೆ. ಇಂತಹ ಪರಿಸ್ಥಿತಿ ಮತ್ತೆ ಉಂಟಾಗದಂತೆ ಜವಾಬ್ದಾರಿಯಿಂದ ನಡೆದುಕೊಳ್ಳುತ್ತೇನೆ” ಎಂದು ಭರವಸೆ ನೀಡಿದರು.
ನಂತರ ರಂಗಮ್ಮ ಅವರನ್ನು ಹೊಸ ಬೆಳಕು ಆಶ್ರಮದಿಂದ ಬಿಡುಗಡೆಗೊಳಿಸಿ, ಅವರ ಮಗ ಸುಮನ್ ಅವರೊಂದಿಗೆ ಸುರಕ್ಷಿತವಾಗಿ ಮನೆಗೆ ಕಳುಹಿಸಲಾಯಿತು.
ಈ ಪ್ರಕರಣದ ಕಾನೂನು ಪ್ರಕ್ರಿಯೆಯನ್ನು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಯೋಜನಾ ಸಂಯೋಜಕರಾದ ರೋಶನ್ ಕೆ ಹಾಗೂ ಆಪ್ತ ಸಮಾಲೋಚಕರಾದ ನಯನ ಅವರು ಯಶಸ್ವಿಯಾಗಿ ನಿರ್ವಹಿಸಿದರು.
ಈ ಪ್ರಕರಣವನ್ನು ಯಶಸ್ವಿಯಾಗಿ ಇತ್ಯರ್ಥಗೊಳಿಸುವಲ್ಲಿ ಮಾನ್ಯ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಹರಿರಾಮ್ ಶಂಕರ್, ಐ.ಪಿ.ಎಸ್. ಅವರ ಮಾರ್ಗದರ್ಶನ ಹಾಗೂ ಮಣಿಪಾಲ ಪೊಲೀಸ್ ನಿರೀಕ್ಷಕರಾದ ಶ್ರೀ ಮಹೇಶ್ ಪ್ರಸಾದ್ ಅವರ ಸಹಕಾರ ಮಹತ್ವದ್ದಾಗಿತ್ತು. ರಂಗಮ್ಮ ಅವರ ಮಕ್ಕಳನ್ನು ಪತ್ತೆಹಚ್ಚುವ ಕಾರ್ಯದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಎ.ಎಸ್.ಐ. ಶ್ರೀ ವಿಜಯ್ ಹಾಗೂ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಶ್ರೀ ಹನುಮಂತಪ್ಪ ವಿಭೂತಿ ಅವರು ಅಮೂಲ್ಯ ಸಹಕಾರ ನೀಡಿದರು. ರಂಗಮ್ಮ ಅವರಿಗೆ ತಾತ್ಕಾಲಿಕ ಆಶ್ರಯ ಹಾಗೂ ಆರೈಕೆ ಒದಗಿಸಿದ ಹೊಸ ಬೆಳಕು ಆಶ್ರಮದ ಸಂಚಾಲಕಿ ಶ್ರೀಮತಿ ತನುಲಾ ತರುಣ್ ಅವರ ಸಹಕಾರದಿಂದ ಪ್ರಕರಣದ ಯಶಸ್ವಿ ಇತ್ಯರ್ಥಕ್ಕೆ ಪ್ರಮುಖವಾಗಿತ್ತು.
ನಮ್ಮ ವರದಿಗಾರರು
ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now