ಹಸ್ತ ಪ್ರತಿಗಳ ಸಂರಕ್ಷಣೆಯು ನಮ್ಮ ಶ್ರೀಮಂತ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಲು ಕೈಗೊಳ್ಳುವ ಮಹತ್ವದ ಕಾರ್ಯವಾಗಿದೆ – ಜಿಲ್ಲಾಧಿಕಾರಿ

ಹಸ್ತ ಪ್ರತಿಗಳ ಸಂರಕ್ಷಣೆಯು ನಮ್ಮ ಶ್ರೀಮಂತ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಲು ಕೈಗೊಳ್ಳುವ ಮಹತ್ವದ ಕಾರ್ಯವಾಗಿದೆ – ಜಿಲ್ಲಾಧಿಕಾರಿ
0Shares

ಉಡುಪಿ ಜುಲೈ 08 :ಹಸ್ತ ಪ್ರತಿಗಳ ಸಂರಕ್ಷಣೆಯು ನಮ್ಮ ಶ್ರೀಮಂತ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಲು ಕೈಗೊಳ್ಳುವ ಮಹತ್ವದ ಕಾರ್ಯವಾಗಿದೆ. ಹಳೆಯ ತಾಳೆ ಗರಿಗಳು ಹಾಗೂ ಅಮೂಲ್ಯ ಹಸ್ತಪ್ರತಿಗಳು ನಶಿಸಿಹೋಗದಂತೆ ತಡೆಯಲು ಜ್ಞಾನ ಭಾರತಂ ಮಿಷನ್ ಯೋಜನೆಯಡಿಯಲ್ಲಿಆಧುನಿಕ ತಂತ್ರಜ್ಞಾನದ ಮೂಲಕ ಡಿಜಿಟಲ್ ರೂಪಾಂತರ ಮಾಡಲಾಗುತ್ತಿದ್ದು, ಈ ಕಾರ್ಯಕ್ಕೆ ಜಿಲ್ಲೆಯ ಜನತೆ ಅಗತ್ಯ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಕರೆ ನೀಡಿದರು.

ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕರ್ನಾಟಕ ಜ್ಞಾನ ಭಂಡಾರ ಹಸ್ತ ಪ್ರತಿಗಳು ಮತ್ತು ಡಿಜಿಟಲೀಕರಣ ಅಧಿನಿಯಮ 2026 ರ ಬಗ್ಗೆ ಚರ್ಚಿಸುವ ಸಲುವಾಗಿ ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಜ್ಞಾನ ಭಾರತಂ ಮಿಷನ್ ಯೋಜನೆಯಡಿಯಲ್ಲಿ ರಾಜ್ಯದಾದ್ಯಂತ ಪ್ರಾಚೀನ ಹಸ್ತಪ್ರತಿಗಳ ಸಮೀಕ್ಷೆ ಹಾಗೂ ಡಿಜಿಟಲೀಕರಣ ಕಾರ್ಯ ಈಗಾಗಲೇ ಆರಂಭವಾಗಿದೆ. ದೇಶದಾದ್ಯಂತ ಒಂದು ಕೋಟಿಗೂ ಹೆಚ್ಚು ಹಸ್ತಪ್ರತಿಗಳನ್ನು ಡಿಜಿಟಲೀಕರಣ ಗೊಳಿಸಲಾಗಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 4 ಲಕ್ಷಕ್ಕೂ ಹೆಚ್ಚು ಹಸ್ತಪ್ರತಿಗಳು ಡಿಜಿಟಲೀಕರಣಗೊಂಡಿದ್ದು, ಜಿಲ್ಲೆಯಲ್ಲಿ 4756 ಹಸ್ತಪ್ರತಿಗಳ ದಾಖಲೆಗಳನ್ನು ಡಿಜಿಟಲೀಕರಣ ಗೊಳಿಸಲಾಗಿದ್ದು, ಜನಸಾಮಾನ್ಯರು ತಮ್ಮ ಬಳಿ ಇರುವ ಹಸ್ತಪ್ರತಿಗಳ ಮಾಹಿತಿಯನ್ನು ನೀಡಿ, ಸಂರಕ್ಷಣಾ ಕಾರ್ಯದಲ್ಲಿ ಭಾಗವಹಿಸುವಂತೆ ತಿಳಿಸಿದರು.

ಜಿಲ್ಲೆಯಲ್ಲಿರುವ ವಿಶ್ವ ವಿದ್ಯಾಲಯಗಳು, ಮಠಗಳು, ಶಿಲ್ಪಿಗಳು, ಜೋತಿಷ್ಯರು, ಅರ್ಚಕರ ಮನೆಗಳು, ಭ್ರಾಹ್ಮಣರು, ಸಾಂಸ್ಥಿಕ ಭಂಡಾರಗಳು, ದೇವಾಲಯಗಳು, ಗ್ರಂಥಾಲಯಗಳು, ಆಶ್ರಮಗಳು,ಜೈನ ಬಸದಿಯವರು, ಆಯುರ್ವೇದ ಪಂಡಿತರು, ಖಾಸಗಿ ವ್ಯಕ್ತಿಗಳು ತಮ್ಮ ಸಂಗ್ರಹದಲ್ಲಿ ಹಳೆಯ ಕೈಬರಹ, ಹಸ್ತಪ್ರತಿ ದಾಖಲೆಗಳು ಲಭ್ಯವಿದ್ದಲ್ಲಿ ನೇರವಾಗಿ ಜ್ಞಾನ ಭಾರತಂ ಆಪ್ ಮೂಲಕ ಅಪ್ಲೋಡ್ ಮಾಡಬಹುದಾಗಿದೆ ಅಥವಾ ಮಾಹಿತಿ ನೀಡಿದ್ದಲ್ಲಿ ಸಮೀಕ್ಷೆದಾರರು ತಮ್ಮಲ್ಲಿಗೆ ಬಂದು ದಾಖಲಿಸಿಕೊಳ್ಳಲಿದ್ದಾರೆ ಎಂದ ಅವರು, ಡಿಜಿಟಲೀಕರಣ ಗೊಳಿಸಿದ ನಂತರ ತಮ್ಮ ಮೂಲ ಹಸ್ತಪ್ರತಿಗಳಿಗೆ ಹಾನಿಯಾಗದಂತೆ ಸುರಕ್ಷಿತವಾಗಿ ವಾಪಸು ನೀಡಲಾಗುವುದು ಎಂದರು.

ತಾಳೆಗರಿ ಹಾಗೂ ಹಳೆಯ ಹಸ್ತಪ್ರತಿಗಳು, ಇತರೆ ರೂಪಗಳಲ್ಲಿ ಬರೆಯಲ್ಪಟ್ಟ ಪ್ರಾಚೀನ ವಿಜ್ಞಾನ, ಸಾಹಿತ್ಯ, ವೈದ್ಯಕೀಯ ಹಾಗೂ ಧಾರ್ಮಿಕ ಜ್ಞಾನ ಗಳನ್ನು ಒಳಗೊಂಡಿದೆ. ಇವುಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದ ಅವರು, ಡಿಜಿಟಲೀಕರಣಗೊಂಡ ಹಸ್ತಪ್ರತಿಗಳು ಭವಿಷ್ಯದಲ್ಲಿ ಸಂಶೋಧಕರಿಗೆ ಸಂಶೋಧನೆ ಮಾಡಲು ಅನುಕೂಲವಾಗಿಲಿದೆ ಎಂದರು.

ಹಸ್ತಪ್ರತಿಗಳಲ್ಲಿರುವ ಭಾಷಾಲಿಪಿ, ಶೈಲಿ, ಔಷಧೀಯ ವಿವರ, ವಿಗ್ರಹಗಳನ್ನು ಕೆತ್ತಲು ಅಳತೆ ಮಾಡುವ ವಿಧಾನ, ಪೂರ್ವಜರ ಆಚಾರ- ವಿಚಾರಗಳು, ಕಲಾ ಕೈ ಚಳಕಗಳು ಸೇರಿದಂತೆ ಅವರಲ್ಲಿದ್ದ ಜ್ಞಾನ ವನ್ನು ತಿಳಿಯಲು, ಅದನ್ನು ಮುಂದುವರೆಸಿಕೊಂಡು ಹೋಗಲು ಹಸ್ತಪ್ರತಿಗಳು ಸಹಕಾರಿಯಾಗಲಿವೆ ಎಂದ ಅವರು, ಹಸ್ತಪ್ರತಿಗಳ ಡಿಜಿಟಲೀಕರಣಕ್ಕೆ ಸಂಬಂಧಿಸಿದಂತೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಸ್ಥಳೀಯ ಸಂಸ್ಥೆಗಳು

ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕೈಗೊಂಡು, ಹೆಚ್ಚಿನ ಪ್ರಚಾರ ನೀಡಿ, ಜನಸಾಮಾನ್ಯರು ಸ್ವಯಂ ಪ್ರೇರಿತವಾಗಿ ಸಮೀಕ್ಷಾ ಕಾರ್ಯದಲ್ಲಿ ಪಾಲ್ಗೊಳ್ಳುವುದರ ಮೂಲಕ ಇದನ್ನು ಯಶಸ್ವಿಗೊಳಿಸಲು ಮುಂದಾಗಬೇಕು ಎಂದರು.

ಸಭೆಯಲ್ಲಿ ಪೌರಾಯುಕ್ತ ಮಹಾಂತೇಶ್ ಹಂಗರಗಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ವಿಂದ್ಯಾ ಎನ್. ಎಂ., ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಧನಲಕ್ಷ್ಮೀ, ಜಿಲ್ಲಾ ವಿಶ್ವಕರ್ಮ ಕಾರ್ಪೆಂಟರ್ ಅಸೋಸಿಯೇಷನ್ ಅಧ್ಯಕ್ಷ ಹರೀಶ್ಆಚಾರ್ಯ, ಆಯುಷ್ ಫೆಡರೇಷನ್ ಆಫ್ ಇಂಡಿಯಾ ಜಿಲ್ಲಾ ಅಧ್ಯಕ್ಷ ಡಾ. ಟಿ. ಎನ್ ಅಂಚನ್, ಸಾಲಿಗ್ರಾಮ ವಲಯ ಬ್ರಾಹ್ಮಣರ ಸಂಘದ ಅಧ್ಯಕ್ಷ ಪಟ್ಟಾಭಿ ಸೋಮಯಾಜಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now