
ಉದ್ಯಾವರ : ಒಂದು ಸಂಸ್ಥೆಯ ವಾರ್ಷಿಕ ಚಟುವಟಿಕೆಗಳ ದಾಖಲಾತಿ ಈ ಕಾಲಮಾನದಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಒಂದು ಸಂಸ್ಥೆ ಮಾಡಿದ ಸಾಮಾಜಿಕ ಚಟುವಟಿಕೆಗಳನ್ನು ಮುಂದಿನ ತಲೆಮಾರಿಗೆ ದಾಟಿಸ ಬೇಕಾದ ಅನಿವಾರ್ಯತೆ ಕೂಡ ಇಂದು ಇದೆ. ಯಾಕಂತ ಹೇಳಿದರೆ ಮುಂದಿನ ತಲೆಮಾರು ಆ ಸೇವಾ ಸಂಸ್ಥೆ ಮಾಡಿದ ಕೆಲಸದ ವೈಖರಿಯನ್ನು ನೋಡಿ ತಾವು ಕೂಡ ಅಂತಹ ಜನಪರ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುವಂತೆ ಮಾಡುವಲ್ಲಿ ಈ ದಾಖಲೆಗಳು ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಈ ನಿಟ್ಟಿನಲ್ಲಿ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಕಳೆದ ಹತ್ತು ವರ್ಷಗಳಿಂದ ಹೊರ ತರುತ್ತಿರುವ ಯು. ಎಫ್. ಸಿ. ಮಾತುಕತೆ ಸಂಚಿಕೆ ಪ್ರಮುಖವಾಗಿದೆ ಎಂದು ಉಡುಪಿ ತಾಲೂಕು ಭೂನ್ಯಾಯ ಮಂಡಳಿಯ ಸದಸ್ಯರಾದ ರೋಯ್ಸ್ ಮಾರ್ವಿನ್ ಫೆರ್ನಾಂಡಿಸ್ ಅವರು 2017 ಸಾಲಿನ ಉಡುಪಿ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ನ ಆಶ್ರಯದಲ್ಲಿ ಜರಗಿದ ಯು. ಎಫ್. ಸಿ. ಮಾತುಕತೆ – 2025 ವಾರ್ಷಿಕ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತಾಡಿದರು.
ಅವರು ಮುಂದುವರಿಯುತ್ತಾ ಉದ್ಯಾವರ ಗ್ರಾಮದಲ್ಲಿ ಜನಪರ ಕೆಲಸ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಈ ಸಂಸ್ಥೆ 50 ಸಂವತ್ಸರವನ್ನ ದಾಟಿ ಮುಂದುವರಿದಿದೆ ಎಂದರೆ ಅದಕ್ಕೆ ಕಾರಣ ಆ ಸಂಸ್ಥೆ ಮಾಡುತ್ತಿರುವ ಜನಪರ ಕಾರ್ಯಗಳು. ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಈ ಸಂಸ್ಥೆ ಸದಾ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿರುತ್ತದೆ. ಅದಕ್ಕೆ ಪೂರಕವಾಗಿ ಉದ್ಯಾವರದ ಜನತೆ ಕೂಡ ಸಂಸ್ಥೆಯನ್ನು ಪ್ರೋತ್ಸಾಹಿಸ್ತಾ ಇದ್ದಾರೆ. ಒಂದು ಸಂಸ್ಥೆ ಆರೋಗ್ಯವಂತ ಮನಸ್ಸುಗಳನ್ನು ಒಂದಾಗಿಸಿ ಜಾತ್ಯಾತೀತವಾಗಿ ಈ ದುರಿತ ಕಾಲದಲ್ಲೂ ಕೆಲಸ ಮಾಡುವುದು ಒಂದು ಸಾಹಸವೇ ಸರಿ. ಅದನ್ನು ಉದ್ಯಾವರ ಫ್ರೆಂಡ್ಸ್ ಸರ್ಕಲ್ ಮಾಡಿ ತೋರಿಸಿದೆ. ಇವರ ಈ ಕಾರ್ಯ ಸದಾ ಮುಂದುವರಿಯಲಿ ಎಂದು ಹಾರೈಸಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಗೌರವಾಧ್ಯಕ್ಷರಾದ ಉದ್ಯಾವರ ನಾಗೇಶ್ ಕುಮಾರ್ ರವರು ಮಾತನಾಡುತ್ತಾ ಕಳೆದ ಹತ್ತು ವರ್ಷಗಳಿಂದ ಈ ವಾರ್ಷಿಕ ಸಂಚಿಕೆಯನ್ನು ಹೊರ ತರುತ್ತಿರುವುದು ನಮ್ಮ ಕೆಲಸ ಕಾರ್ಯಗಳು ಒಂದೆಡೆ ದಾಖಲಾಯಾಗಲಿ ಎಂಬ ನೆಲೆಯಲ್ಲಿ ವಿನಹ ಯಾವುದೇ ಪ್ರಚಾರಕ್ಕಾಗಿ ಅಲ್ಲ. 10 ವರ್ಷದ ನಂತರ ಸಂಸ್ಥೆ ಮಾಡಿದ ಕೆಲಸದ ಬಗ್ಗೆ ಈ ಸಂಚಿಕೆಯನ್ನು ಕೈಗೆ ಎತ್ತಿಕೊಂಡಾಗ ನಮಗೆ ಗೊತ್ತಾಗುತ್ತೆ. ಈ ನಿಟ್ಟಿನಲ್ಲಿ ಈ ಸಂಚಿಕೆ ಪ್ರಕಟಗೊಳ್ಳುತ್ತದೆ ಇದು ಮುಂದುವರೆಯಲಿ ಎಂದರು
ಮಾಜಿ ಅಧ್ಯಕ್ಷರಾದ ರಿಯಾಝ್ ಪಳ್ಳಿಯವರು ಮಾತನಾಡಿ ಸಂಸ್ಥೆಯ ಜನಪರ ಕೆಲಸಗಳು ಇನ್ನಷ್ಟು ವೇಗ ಹೆಚ್ಚಿಸಿಕೊಳ್ಳಲಿ ಈ ಮೂಲಕ ಜನರಿಗೆ ಅನುಕೂಲವಾಗಲಿ ಎಂದು ಹಾರೈಸಿದರು.
ಸಂಸ್ಥೆಯ ಅಧ್ಯಕ್ಷ ಗಿರೀಶ್ ಗುಡ್ಡೆಯಂಗಡಿ ಸ್ವಾಗತಿಸಿದರೆ, ಪ್ರಧಾನ ಕಾರ್ಯದರ್ಶಿ ಸುಹೇಲ್ ರಹಮತುಲ್ಲ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕರಾದ ಚಂದ್ರಾವತಿ ಎಸ್. ಭಂಡಾರಿ, ಶರತ್ ಕುಮಾರ್, ಯು.ಪದ್ಮನಾಭ ಕಾಮತ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕೋಶಾಧಿಕಾರಿ ಸತೀಶ್ ಡಿ. ಸಾಲ್ಯಾನ್, ಉಪಾಧ್ಯಕ್ಷ ಶ್ರೀಧರ ಮಾಬಿಯಾನ್, ಕಾರ್ಯದರ್ಶಿಗಳಾದ ಆಶಾ ವಾಸು, ಭಾಸ್ಕರ್ ಬಂಗೇರ, ಮಾಜಿ ಅಧ್ಯಕ್ಷ ಅನುಪ್ ಕುಮಾರ್, ಸದಸ್ಯರಾದ ಲೋಕನಾಥ್ ಬೊಳ್ಜೆ ಮೊದಲಾದವರು ಉಪಸ್ಥಿತರಿದ್ದರು.
ನಮ್ಮ ವರದಿಗಾರರು
ಸ್ಟೀವನ್ ಕುಲಾಸೊ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now