
ಉಡುಪಿ ಡಿಸೆಂಬರ್ 19 : ನಾಡ-ನುಡಿಯಾದ ಕನ್ನಡ ಭಾಷೆಯನ್ನು ಸರಕಾರಿ ಕಚೇರಿಗಳು ಸೇರಿದಂತೆ ಎಲ್ಲಾ ಖಾಸಗಿ, ವಾಣಿಜ್ಯ ಹಾಗೂ ಇತರೆ ಸಂಸ್ಥೆಗಳು ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ಕಡ್ಡಾಯವಾಗಿ ಬಳಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಕರೆ ನೀಡಿದರು.
ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಪ್ರತಿಯೊಬ್ಬರೂ ಮಾತೃಭಾಷೆಯಾದ ಕನ್ನಡದ ಬಗ್ಗೆ ಅಭಿಮಾನ ಹೊಂದಿ, ದೈನಂದಿನ ಕಾರ್ಯಗಳಲ್ಲಿ ಹೆಚ್ಚಾಗಿ ಬಳಸಬೇಕು. ಜಿಲ್ಲೆಯಲ್ಲಿ ಉದ್ಯೋಗ ಅರಸಿ ಬಂದಿರುವ ಹೊರ ರಾಜ್ಯದ ಅನ್ಯ ಭಾಷಿಕರಿಗೂ ಸಹ ನಮ್ಮ ಭಾಷೆಯನ್ನು ಕಲಿಯಲು ಉತ್ತೇಜಿಸಬೇಕು ಎಂದ ಅವರು, ಎಲ್ಲಾ ಸರ್ಕಾರಿ ಕಚೇರಿಯ ಆಡಳಿತದಲ್ಲಿ ಕನ್ನಡ ಬಳಸಬೇಕು. ಆಡಳಿತದಲ್ಲಿ ಕನ್ನಡ ತಂತ್ರಾಶದ ಬಳಕೆಯನ್ನು ಅಳವಡಿಸಿಕೊಳ್ಳಬೇಕು ಎಂದರು.
ರಾಜ್ಯದ ಸರ್ಕಾರಿ ಕಚೇರಿಗಳು, ವಾಣಿಜ್ಯ ಸಂಸ್ಥೆಗಳು, ಕೈಗಾರಿಕೆಗಳು, ಅಂಗಡಿ, ಹೋಟೆಲ್, ಶಾಲಾ-ಕಾಲೇಜು, ಪ್ರವಾಸೋದ್ಯಮ ಸೇರಿದಂತೆ ಮತ್ತಿತರ ಕಡೆಗಳಲ್ಲಿ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸಬೇಕು ಎಂಬ ನಿಯಮವಿದೆ. ಇದನ್ನು ಉಲ್ಲಂಘಿಸಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಕನ್ನಡ ಭಾಷೆಯನ್ನು ಉಳಿಸಿ, ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಇಲಾಖೆಗಳು ಹಾಗೂ ಸರ್ಕಾರೇತರ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಸಾಹಿತಿಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಕನ್ನಡ ಉಳಿಸಲು ಹೋರಾಟ ಮಾಡಿದ ಹೋರಾಟಗಾರರು ಸೇರಿದಂತೆ ಮತ್ತಿತರರ ಕುರಿತು ನಾಟಕಗಳು, ಚರ್ಚಾ ಸ್ಪರ್ಧೆಗಳನ್ನು ಆಯೋಜಿಸಿದ್ದಲ್ಲಿ, ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಈ ಮೂಲಕ ಕನ್ನಡ ಭಾಷೆ ಉಳಿವಿಗೆ ಪ್ರಯತ್ನಿಸಬೇಕು ಎಂದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಸಲಾದ ಊರುಗಳ ದೂರ ಫಲಕಗಳ ಕನ್ನಡ ಮತ್ತು ಆಂಗ್ಲ ಭಾಷೆಯ ಮಾಹಿತಿಯು ಹೊಂದಾಣಿಕೆಯಿಲ್ಲದೆ ಗೊಂದಲದಿಂದ ಕೂಡಿರುತ್ತದೆ. ಇದಕ್ಕೆ ಪ್ರಾಧಿಕಾರದ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದ ಅವರು, ನಮ್ಮ ಮಾತೃಭಾಷೆಯ ಮೇಲೆ ಪ್ರತಿಯೊಬ್ಬರಲ್ಲೂ ಒಲವು ಇರಬೇಕು. ಆಗ ಮಾತ್ರ ಕನ್ನಡ ಭಾಷೆಯನ್ನು ಉಳಿಸಿ-ಬೆಳೆಸಲು ಸಾಧ್ಯ. ಈ ನಿಟ್ಟಿನಲ್ಲಿ ಒತ್ತು ನೀಡಬೇಕು ಎಂದರು.
ಆಸ್ಪತ್ರೆಗಳಲ್ಲಿ ವೈದ್ಯರು ನೀಡುವ ಚೀಟಿಗಳಲ್ಲಿ ರೋಗಿಗಳ ಹೆಸರುಗಳನ್ನು ಕನ್ನಡ ಭಾಷೆಯಲ್ಲಿ ನಮೂದಿಸಬೇಕು. ಬ್ಯಾಂಕ್ಗಳಲ್ಲಿ ನೇಮಕವಾಗಿರುವ ಅಧಿಕಾರಿಗಳು ಬಹುತೇಕರು ಬೇರೆ ರಾಜ್ಯದವರೇ ಆಗಿರುವುದರಿಂದ ಅವರುಗಳೊಂದಿಗೆ ಸ್ಥಳೀಯ ಬ್ಯಾಂಕ್ ಗ್ರಾಹಕರುಗಳು ಸಂವಹನ ಮಾಡಲು ಕಷ್ಟ ಸಾಧ್ಯ. ಇದು ಗ್ರಾಮೀಣ ಭಾಗದ ಜನರ ಮೇಲೆ ಹೆಚ್ಚಿನ ಪ್ರಭಾವ ಬೀರಲಿದೆ. ಅದ್ದರಿಂದ ಬ್ಯಾಂಕ್ನ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೂ ಕನ್ನಡ ಕಲಿಸುವ ತರಗತಿಗಳನ್ನು ಆಯೋಜಿಸಬೇಕು. ಜೊತೆಗೆ ಬ್ಯಾಂಕಿನ ಗ್ರಾಹಕರೊಂದಿಗೆ ಸಂಯಮ, ಸೌಜನ್ಯ ಹಾಗೂ ತಾಳ್ಮೆಯಿಂದ ವರ್ತಿಸುವಂತೆ ಭಾಷಾ ಕೌಶಲ್ಯವನ್ನು ಅವರುಗಳಿಗೆ ನೀಡಬೇಕು ಎಂದರು.
ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುತ್ತಿರುವ ಬಗ್ಗೆ ಪರಿಶೀಲನೆ ನಡೆಸಬೇಕು. ಕೆಲವು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಭಾಷೆ ಮಾತನಾಡುವ ಮಕ್ಕಳ ಮೇಲೆ ದಂಡ ವಿಧಿಸಲಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಸೂಕ್ತ ಕ್ರಮವಹಿಸಬೇಕು. ವಿದ್ಯಾರ್ಥಿಗಳಲ್ಲಿ ಆಂಗ್ಲಮಾಧ್ಯಮದಲ್ಲಿ ವ್ಯಾಸಾಂಗ ಮಾಡುವುದರಿಂದ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂಬ ಮನೋಭಾವವನ್ನು ಹೋಗಲಾಡಿಸಲು ಗ್ರಾಮೀಣ ಭಾಗದಲ್ಲಿ ವ್ಯಾಸಾಂಗ ಮಾಡುವ ಮಕ್ಕಳಿಗೆ ಉಪಯೋಗವಾಗುವ ನಿಟ್ಟಿನಲ್ಲಿ ದ್ವಿ-ಭಾಷಾ ನೀತಿಯನ್ನು ಅನುಷ್ಠಾನ ಮಾಡಿಲಾಗಿದೆ ಎಂದ ಅವರು, ಕರಕುಶಲ ಕಲೆ, ನಾಟಕ, ಯಕ್ಷಗಾನ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ, ಮಕ್ಕಳಲ್ಲಿ ಕನ್ನಡ ಭಾಷೆಯ ಬಗ್ಗೆ ಒಲವು ಮೂಡಿಸಬೇಕು ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಯಾಕೂಬ್ ಖಾದರ್ ಗುಲ್ವಾಡಿ ಮಾತನಾಡಿ, ಕನ್ನಡ ಭಾಷೆ, ಕನ್ನಡ ಶಾಲೆಯನ್ನು ಉಳಿಸಿ ಬೆಳೆಸುವ ಪ್ರಯತ್ನ ಪ್ರತಿಯೊಬ್ಬರೂ ಮಾಡಬೇಕು. ಶತಮಾನ ಕಂಡ ಶಾಲೆಗಳು ಜಿಲ್ಲೆಯಲ್ಲಿ ಬಹುತೇಕ ಇವೆ. ಇವುಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ, ಅಗತ್ಯ ಮೂಲಭೂತ ಸೌಕರ್ಯ, ಗ್ರಂಥಾಲಯ ಸೇರಿದಂತೆ ಮತ್ತಿತರ ಸೌಲಭ್ಯ ಒದಗಿಸಿ, ಮಕ್ಕಳಲ್ಲಿ ಕನ್ನಡ ಶಾಲೆಯ ಬಗ್ಗೆ ಒಲವು ಮೂಡಿಸಬೇಕು ಎಂದರು.
ಸಭೆಯಲ್ಲಿ ಕನ್ನಡ ಜಾಗೃತಿ ಸಮಿತಿಯ ಸದಸ್ಯರಾದ ಮುಸ್ತಾಕ ಹೆನ್ನಾಬೈಲ್, ಅವಿನಾಶ್ ಕಾಮತ್, ಗಣೇಶ್ ಮೆಂಡನ್, ವಾಸುದೇವ ಗಂಗೇರ ಹಾಗೂ ಜಮಾಲ್ ಎ, ಪೌರಾಯುಕ್ತ ಮಹಾಂತೇಶ ಹಂಗರಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ವಾರ್ತಾಧಿಕಾರಿ ಮಂಜುನಾಥ್ ಬಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now