Puttur, October 1, 2024: ಕಳೆದ ವರ್ಷದಿಂದ ಮತ್ತೆ ಪುತ್ತೂರು ಶಾರದೋತ್ಸವದ ದತ್ತ ವೈಭವ ಮರು ಸೃಷ್ಟಿಯಾಗುತ್ತಿದ್ದು 90ನೇ ವರ್ಷದ ನವರಾತ್ರಿ ಉತ್ಸವ ‘ಪುತ್ತೂರು ಶಾರದೋತ್ಸವ’ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಅಕ್ಟೋಬರ್ 3ರಿಂದ 12ರವರೆಗೆ ನಡೆಯಲಿದ್ದು, ಈ ಬಾರಿ ಮೂರು ಪಟ್ಟು ಹೆಚ್ಚಿನ ಮೆರುಗು ನೀಡಲಾಗುವುದು ಎಂದು ಶ್ರೀ ಶಾರದಾ ಭಜನಾ ಮಂದಿರದ ಗೌರವಾಧ್ಯಕ್ಷ ಕೆದಂಬಾಡಿಗುತ್ತು ಸೀತಾರಾಮ ರೈ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮದ ರೂಪರೇಷೆಗಳ ಬಗ್ಗೆ ಮಾಹಿತಿ ನೀಡಿದರು. ಅಕ್ಟೋಬರ್ 2ರಂದು ದರ್ಬೆ ವೃತ್ತದಿಂದ ಶಾರದಾ ಭಜನಾ ಮಂದಿರಕ್ಕೆ ಹೊರೆ ಕಾಣಿಕೆ ಸಮರ್ಪಣೆ ಮೆರವಣಿಗೆ ನಡೆಯಲಿದೆ.
ಅಕ್ಟೋಬರ್ 3ರಂದು ನವರಾತ್ರಿ ಪೂಜೆ ಆರಂಭಗೊಳ್ಳಲಿದೆ. ಅಂದು ಅಕ್ಷರಯಜ್ಞ ಸೇವೆಗಾಗಿ ಭಕ್ತರಿಗೆ ಮತ್ತು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಗುವುದು. ಅಕ್ಟೋಬರ್ 9ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಶಾರದಾ ವಿಗ್ರಹ ಪ್ರತಿಷ್ಠೆ ಅಕ್ಷರಯಜ್ಞ ಸರಸ್ವತಿ ಪೂಜೆ ನಡೆಯಲಿದೆ.
ಅಕ್ಟೋಬರ್ 10ರಂದು ಬೆಳಿಗ್ಗೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಚಂಡಿಕಾಹೋಮ ನಡೆಯಲಿದೆ. 12ರಂದು ಬೆಳಿಗ್ಗೆ ಗಂಟೆ 9ರಿಂದ ಅಕ್ಷರ ಅಭ್ಯಾಸ ಸಂಜೆ 5:00 ಗಂಟೆಗೆ ವೇದಘೋಷ, ಚೆಂಡೆ ಮೇಳ ಹಾಗೂ ಇತರ ವೈವಿಧ್ಯಗಳೊಂದಿಗೆ ಶೋಭಾ ಯಾತ್ರೆ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ಶಾರದಾ ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿ ಜಯಂತ ಉರ್ಲಾಂಡಿ, ಸಮಿತಿ ಅಧ್ಯಕ್ಷ ಪಿಜಿ ಜಗನ್ನಿವಾಸ ರಾವ್, ಹೊರೆ ಕಾಣಿಕೆ ಸಮಿತಿ ಸಂಚಾಲಕ ರಾಜೇಶ್ ಬನ್ನೂರು, ಶೋಭಾ ಯಾತ್ರೆಯ ಸಂಚಾಲಕ ನವೀನ್ ಕುಲಾಲ್, ಡಾ. ಸುರೇಶ್ ಪುತ್ತೂರಾಯ ಉಪಸ್ಥಿತರಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now
























